ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನ ಮೂಡುಬಿದಿರೆ ಇದರ ಆಶ್ರಯದಲ್ಲಿ ಎಂ.ಸಿ.ಎಸ್. ಬ್ಯಾಂಕ್ ಸಹಯೋಗದೊಂದಿಗೆ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ ಸಮಾರಂಭವು ಶನಿವಾರ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆಯಿತು.
ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ನಿಟ್ಟೆಯ ಜ.ಕೆ. ಎಸ್. ಹೆಗ್ಡೆ ಪ್ರತಿಷ್ಠಾನ ಪ್ರಾಯೋಜಿತ ರೂ. 15,000 ಗೌರವ ಸಂಭಾವನೆ ಸಹಿತ `ಶಿವರಾಮ ಕಾರಂತ ಪ್ರಶಸ್ತಿ‘ ಮತ್ತು ಡಾ. ನಾ. ಮೊಗಸಾಲೆ ಅವರಿಗೆ, `ಮುಖಾಂತರ‘ ಕಾದಂಬರಿಗಾಗಿ, ಎಂ.ಸಿ.ಎಸ್. ಬ್ಯಾಂಕ್ ಪ್ರಾಯೋಜಿತ ರೂ. 10,000 ಗೌರವ ಸಂಭಾವನೆ ಸಹಿತ `ಶಿವರಾಮ ಕಾರಂತ ಪುರಸ್ಕಾರ‘ ಪ್ರದಾನ ಮಾಡಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು `ನನ್ನ ನೆನಪಿನೊಳಗೆ ಶಿವರಾಮ ಕಾರಂತ’ ಕುರಿತು ಮಾತನಾಡಿ, ಎಲ್ಲ ರಂಗದಲ್ಲಿ ಕೆಲಸ ಮಾಡಿದ ನಡೆದಾಡುವ ವಿಶ್ವಕೋಶವೆನ್ನಿಸಿದವರು ಶಿವರಾಮ ಕಾರಂತ. ಯಾವುದೇ ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ. ಸದಾ ಸಮಪ್ರಜ್ಞೆ ಬೆಳೆಸಿಕೊಂಡವರು ಕಾರಂತರು. ಅವರ ಸಾಧನೆಗಳು ಸರ್ವರಿಗೆ ಆದರ್ಶಪ್ರಾಯವಾದದ್ದು ಎಂದರು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ. ನಾ. ಮೊಗಸಾಲೆ, ಕರಾವಳಿಯ ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ಸಾಹಿತ್ಯ ಲೋಕದಲ್ಲಿ ಅಪೂರ್ವ ಕೆಲಸ ಮಾಡಿದ ರತ್ನಾಕರವರ್ಣಿ, ಶಿವರಾಮ ಕಾರಂತ, ಗೋಪಾಲಕೃಷ್ಣರಂತಹ ಅಡಿಗರಂತ ಮಹಾನ್ ಚೇತನಗಳನ್ನು ನೆನಪಿಸುವಂತ ಕೆಲಸವಾಗುತ್ತಿಲ್ಲ. ಸರ್ಕಾರ ಇನ್ನಾದರು ಇಂತವರ ಹೆಸರಿನಲ್ಲಿ ಪ್ರತಿಷ್ಠಾನ, ಅದಕ್ಕೆ ಪೂರಕವಾದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸುವ ಜಾಯಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವಿಭಿನ್ನ ಆಸಕ್ತಿಗಳನ್ನು ಬೆಳೆಸಿಕೊಂಡ ಜಗತ್ತಿನ ಬೆರಳಿಣಿಕೆಯ ಸಾಹಿತಿಗಳಲ್ಲಿ ಕಾರಂತರು ಒಬ್ಬರು. ಮಾನವೀಯ ಮೌಲ್ಯದ ಜೊತೆಗೆ ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂಧಿಸುವ ಶ್ರೇಷ್ಠಗುಣ ಅವರಲ್ಲಿತ್ತು ಎಂದರು.
ಪ್ರತಿಷ್ಠಾನದ ಸದಸ್ಯ ಕೆ.ಶ್ರೀಪತಿ ಭಟ್, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ. ಚಂದ್ರಶೇಖರ ಉಪಸ್ಥಿತರಿದ್ದರು.
ವಾರ್ತಾ ಇಲಾಖೆಯ ಪ್ರಾಯೋಜಕತ್ವದಲ್ಲಿ ಕಾರಂತ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ, ಡಾ. ಮೊಗಸಾಲೆ ಅವರ ಹೊಸ ಕಾದಂಬರಿ ಧಾತು ಬಿಡುಗಡೆ, ಶಿವರಾಮ ಕಾರಂತರ ಕಾದಂಬರಿ ವಿಮರ್ಶೆ ಸ್ಪರ್ಧೆಯಲ್ಲಿ ಗೆದ್ದ ಮೂಡಬಿದಿರೆಯ ಹೈಸ್ಕೂಲು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರ ನಿರ್ದೇಶನದಲ್ಲಿ ಒಂದು ತಾಸು ಅವಧಿಯ `ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಪ್ರತಿಷ್ಠಾನದ ಕೋಶಾಧಿಕಾರಿ ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ ಮಾವಿನಕುಳಿ ಕಾರ್ಯಕ್ರಮ ನಿರೂಪಿಸಿದರು.

