ಬಂಟ್ವಾಳ: ಗ್ರಾಮೀಣ ಪ್ರದೇಶವಾಗಿದ್ದರೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕೊಯಿಲ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಕೋರಿಕೆಯಂತೆ ಈಗಾಗಲೇ 200 ಮೀ. ವಿಸ್ತಾರದ ಕ್ರೀಡಾಂಗಣ ಮತ್ತು ರೂ 42ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಖಾಸಗಿ ಶಾಲೆ ಮಾದರಿಯಲ್ಲಿ ಸುಸಜ್ಜಿತ ಕೊಠಡಿ ಮತ್ತಿತರ ಅತ್ಯಾಧುನಿಕ ಸೌಲಭ್ಯ ದೊರಕಿಸಿಕೊಡಲು ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಶಿಕ್ಷಣಕ್ಕೆ ಒತ್ತು ನೀಡುವುದಕ್ಕಾಗಿ ಸರ್ಕಾರ ವಿದ್ಯಾಸಿರಿಯಂತಹ ಮಹತ್ವದ ಯೋಜನೆ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದರು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಶಾಹುಲ್ ಹಮೀದ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ,ಮಾಯಿಲಪ್ಪ ಸಾಲ್ಯಾನ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯೆ ಮಂಜುಳಾ ಸದಾನಂದ, ರಜತ ಸಮಿತಿ ಗೌರವಾಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್, ವಿಜಯಾ ಬ್ಯಾಂಕಿನ ವ್ಯವಸ್ಥಾಪಕ ಬೇಬಿ ಕುಂದರ್, ಸಿದ್ಧಕಟ್ಟೆ ಚರ್ಚಿನ ಧರ್ಮಗುರು ಅಂತೋನಿ ಲಸ್ರಾದೊ ಮತ್ತಿತರರು ಶುಭ ಹಾರೈಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ನಿರುಪಮಾ ಎಸ್.ಭಂಡಾರಿ, ಶೋಭಾ ಎನ್.ಸಪಲ್ಯ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದೇವಪ್ಪ ಕರ್ಕೇರ, ರಾಷ್ಟ್ರಪ್ರಶಸ್ತಿ ಪುರಸ್ಕøತ ಮುಖ್ಯಶಿಕ್ಷಕ ಕೆ.ರಮೇಶ ನಾಯಕ್, ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾಯಕ್, ನಿವೃತ್ತ ಶಿಕ್ಷಕಿ ಜೆ.ಕೆ.ಪಾವನಾದೇವಿ, ಬಂಟ್ವಾಳ ಸಹಶಿಕ್ಷಕರ ಸಂಘದ ಅಧ್ಯಕ್ಷ ಜೋಯೆಲ್ ಲೋಬೊ, ಜಿಲ್ಲಾ ಸಂಘದ ಕಾರ್ಯದರ್ಶಿ ತಾರೇಶ ನಾಯ್ಕ್, ಶಿಕ್ಷಣ ತಜ್ಞ ಎ.ರಾಮಣ್ಣ ರೈ, ರಜತ ಸಮಿತಿ ಉಪಾಧ್ಯಕ್ಷ ಸಚ್ಚಿದಾನಂದ ಮತ್ತಿತರರು ಇದ್ದರು.
ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆ, ಈ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ‘ಗುರುವಂದನೆ’ ಮತ್ತು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರಜತ ಸಮಿತಿ ಅಧ್ಯಕ್ಷ ಜಗದೀಶ ಕೊಯಿಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕ ಸುಧೀರ್ ಜಿ. ವರದಿ ವಾಚಿಸಿದರು. ದೈಹಿಕ ಶಿಕ್ಷಕ ಜನಾರ್ದನ ವಂದಿಸಿದರು. ಶಿಕ್ಷಕರಾದ ಮಹೇಶ ಕರ್ಕೇರ ಮತ್ತು ಜ್ಯೋತಿ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

