ಬಂಟ್ವಾಳ: ಮೆಸ್ಕಾಂ ಬಿಲ್ ಪಾವತಿಸುವ ಸಂದರ್ಭ 2 ಸಾವಿರ ರೂಪಾಯಿ ಹೊಸ ನೋಟನ್ನು ನಿರಾಕರಿಸಿದ ಘಟನೆ ಬಿ.ಸಿ.ರೋಡ್ ಮೆಸ್ಕಾಂ ಕಚೇರಿಯಲ್ಲಿ ನಡೆದಿದೆ.
ಅಮ್ಟಾಡಿ ಪಂಚಾಯತ್ ಸದಸ್ಯ ಶೇಖರ ಶೆಟ್ಟಿ ಎಂಬವರು ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಯಲ್ಲಿ ಬಿಲ್ಲು ಪಾವತಿಸುವ ಸಂದರ್ಭ 2 ಸಾವಿರ ರೂ. ಹೊಸ ನೋಟು ನೀಡಿದಾಗ ಮಹಿಳಾ ಸಿಬ್ಬಂದಿಯೊಬ್ಬರು ಈ ನೋಟನ್ನು ಸ್ವೀಕರಿಸಲು ನಿರಾಕರಿಸಿದರು. ಈ ಬಗ್ಗೆ ವಿಚಾರಿಸಿದಾಗ 2 ಸಾವಿರ ರೂ ನೋಟಿನಿಂದ ಗೊಂದಲವಾಗಿದೆ ಎಂದು ಹಾರಿಕೆಯ ಉತ್ತರ ನೀಡಿ ಉಡಾಫೆಯಿಂದ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸಿಬ್ಬಂದಿ ವರ್ತನೆ ಬಗ್ಗೆ ಅವರು ಮೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರಿಗೆ ಲಿಖಿತ ದೂರು ನೀಡಿ, ವಿದ್ಯುತ್ ಬಿಲ್ಲು ಸ್ವೀಕರಿಸುವ ಕೇಂದ್ರದಿಂದ ಸಿಬಂದಿಯನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ 2 ಸಾವಿರ ರೂ ನೂತನ ನೋಟು ಸ್ವೀಕರಿಸದೇ ಇದ್ದರೆ ಕೇಂದ್ರ ಸರಕಾರ ಗಮನಕ್ಕೆ ತರಲಾಗುವುದು. ಕಚೇರಿ ಮುಂದೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

