ಪೊಳಲಿ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ 7ನೇ ತರಗತಿ ವಿದ್ಯಾರ್ಥಿಗೆ ಚಾಕಲೇಟು ನೀಡಿ, ಅಪಹರಿಸಲು ಯತ್ನ ನಡೆಸಿದ ಘಟನೆ ಮಂಗಳವಾರ ಬೆಳಿಗ್ಗೆ 7.30 ರ ವೇಳೆ ಪುಂಚಮೆ ಎಂಬಲ್ಲಿ ನಡೆದಿದೆ.
ಘಟನೆ ವಿವರ:
ಕರಿಯಂಗಳ ಗ್ರಾಮದ ಸಾಣೂರು ಪದವಿನ ವಾಮನ ಎಂಬವರ ಮಗನಾದ ನಿಖಿಲ್(13) ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಶಾಲೆಗೆ ಹೋಗಲು ಶಾಲಾ ವಾಹನ ವ್ಯವಸ್ಥೆಯಿದ್ದು, ಸಾಣೂರು ಪದವಿನಿಂದ ಪುಂಚಮೆ ಜಂಕ್ಷನ್‍ವರೆಗೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಕೆಲವೊಂದು ದಿನ ಆತನ ತಂದೆ ಅವರ ದ್ವಿಚಕ್ರ ವಾಹನದಲ್ಲಿ ಶಾಲಾ ವಾಹನಕ್ಕೆ ಬಿಡುತ್ತಿದ್ದರು. ಎಂದಿನಂತೆ ಮಂಗಳವಾರ ಶಾಲೆಗೆ ಹೊರಡಿ ಬೆಳಿಗ್ಗೆ 7.30ರ ವೇಳೆಗೆ ಪುಂಚಮೆಗೆ ನಡೆದುಕೊಂಡು ಹೋಗುವಾಗ ಕಪ್ಪು ಬಣ್ಣದ ಓಮಿನಿ ಕಾರಿನಲ್ಲಿ ಚಾಲಕ ಸೇರಿ ನಾಲ್ವರಲ್ಲಿ ಮೂವರು ಮಂಕಿ ಕ್ಯಾಪ್ ಧರಿಸಿದ್ದ ಅವರು ಬಾಲಕನನ್ನು ನೋಡಿ ಡೋರ್ ಓಪನ್ ಮಾಡಿ ಮೂವರು ಬಾಲಕನ ಬಳಿ ಬಂದು ಡ್ರಾಪ್ ನೀಡುತ್ತೇವೆಂದು ಹೇಳಿದಾಗ ಹೆದರಿದ ಬಾಲಕನನ್ನು ಕಂಡು ಚಾಕಲೇಟು ನೀಡುತ್ತೇನೆ ಬಾ ಎಂದು ಕರೆದಿದ್ದಾರೆ. ಅದನ್ನು ನಿರಾಕರಿಸಿ ಬಾಲಕ ಕೂಡಲೇ ಓಡಲಾರಂಭಿಸಿದ.
ಈ ಹಿಂದೆ ಅಮುಂಜೆ ಗ್ರಾಮದ ಮಕ್ಕಳನ್ನು ಕೆಲವು ದುಷ್ಕರ್ಮಿಗಳು ಅಪಹರಿಸಲು ಯತ್ನ ನಡೆಸಿದ್ದಾರೆಂದು ಎಲ್ಲೆಡೆ ಸುದ್ದಿ ಹಬ್ಬಿತು. ಈ ವಿಷಯದ ಕುರಿತು ಪ್ರತಿಯೊಂದು ಮನೆಯಲ್ಲಿ ತಮ್ಮ ಹೆತ್ತವರು ಆತಂಕಗೊಂಡು ವಿಷಯದ ಕುರಿತು ಚರ್ಚೆ ನಡೆಸುತ್ತಿದ್ದರು. ಇದನ್ನು ಆಲಿಸಿಕೊಂಡಿದ್ದ ಬಾಲಕ ಎಚ್ಚೆತ್ತುಕೊಂಡು ತಕ್ಷಣ ಅಲ್ಲಿಂದ ರಸ್ತೆ ಮೂಲಕ ಹೋದರೆ ತನ್ನನ್ನು ಬೆನ್ನಟ್ಟಿಕೊಂಡು ಬರುತ್ತಾರೆಂದು ಕಾಲುದಾರಿಯಲ್ಲಿ ತನ್ನ ಮನೆಗೆ ಓಡಿಕೊಂಡು ಹೋಗಿದ್ದಾನೆ.
ಬಳಿಕ ದುಷ್ಕರ್ಮಿಗಳು ಕಾರನ್ನು ತಿರುಗಿಸಿ ಅಲ್ಲಿಂದ ಪರಾರಿಯಾಗಿದ್ದಾರೆಂದು ಗುಮಾನಿ ಹಬ್ಬಿದೆ.
ಘಟನೆ ನಡೆದ ಬಳಿಕ ಬಾಲಕ ಹೆದರಿ ನಡುಗುತ್ತಿದ್ದು, ಹೆತ್ತವರು ಗಾಬರಿಗೊಂಡು ಬಾಲಕನನ್ನು ಕೇಳಿದಾಗ ನಡುಕದಿಂದಲೇ ನಡೆದ ಘಟನೆ ವಿವರವನ್ನು ತಿಳಿಸಿದ್ದಾನೆ. ಹಲವು ಮಂದಿ ಬಾಲಕನ ಮನೆಗೆ ಹೋಗಿ ಬಾಲಕನಿಗೆ ಧೈರ್ಯ ಹೇಳಿದ್ದಾರೆ. ಸುದ್ದಿ ತಿಳಿದ ನಮ್ಮ ಪ್ರತಿನಿಧಿ ಬಾಲಕನ ಮನೆಗೆ ಹೋಗಿ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದಾರೆ. ಪ್ರತಿನಿಧಿಯ ಸೂಚನೆಯಂತೆ ನಿಖಿಲ್ ಹೆತ್ತವರು ಬಂಟ್ವಾಳ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

