ಮೂಡುಬಿದಿರೆ: ಕೃಷಿರಂಗದ ದ್ವಂದ್ವ ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತಿದೆ. ಈ ಹಂತದಲ್ಲಿ ಕೃಷಿಕರು ತಮ್ಮ ಚಿಂತನಾಲಹರಿಯನ್ನು ಬದಲಾಯಿಸಿಕೊಂಡು ವೈಜ್ಞಾನಿಕತೆಯ ನೈಜ್ಯ ಅನುಷ್ಠಾನದಿಂದ ಕೃಷಿಯಲ್ಲಿ ಪ್ರಗತಿ ಸಾಧಿಸುವಂತಾಗಬೇಕು. ವೈಜ್ಞಾನಿಕ ಅರಿವು ಮತ್ತು ಅದರ ಸರಿಯಾದ ಅನುಷ್ಠಾನದಿಂದ ಕೃಷಿಯನ್ನು ಲಾಭದಾಯಿಕಗೊಳಿಸಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಚ್.ಎಲ್ ಮಂಜುನಾಥ್ ಹೇಳಿದರು. ಅವರು ಆಳ್ವಾಸ್ ನುಡಿಸಿರಿ ಅಂಗವಾಗಿ ಗುರುವಾರ ಸಂಜೆ ವಿದ್ಯಾಗಿರಿಯ ಶಿರ್ತಾಡಿ ಧರ್ಮಸಾಮ್ರಾಜ್ಯ ಕೃಷಿ ಆವರಣದಲ್ಲಿ ಮಿಜಾರು ಅಣ್ಣಪ್ಪ ವೇದಿಕೆಯಲ್ಲಿ ಮೂರು ದಿನಗಳ ಆಳ್ವಾಸ್ ಕೃಷಿಸಿರಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ಶೇ54 ಮಂದಿ ಕೃಷಿಕರಿದ್ದಾರೆ. ಆದಾಯದಲ್ಲಿ ಅವರ ಕೊಡುಗೆ ಶೇ 20 ಮಾತ್ರ. ರೈತರು ಇಂದಿನ ಬೇಡಿಕೆಗಳಿಗೆ ಸ್ಪಂದಿಸುವುದಕ್ಕೆ ಆದ್ಯತೆ ನೀಡಬೇಕು. ಸರಕಾರವು ಗ್ರಾಮಾಭಿವೃಧ್ಧಿ ಯೋಜನೆಯ ಜತೆಗೆ ಸೇರಿಕೊಂಡು ಒದಗಿಸುತ್ತಿರುವ ಯಾಂತ್ರಿಕ ನೆರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಸೇರಿದ್ದ ಗಣ್ಯರ ಜತೆಯಲ್ಲಿ ಮಿಜಾರುಗುತ್ತು ಆನಂದ ಆಳ್ವ ಕೃಷಿ ಸಿರಿಯನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ತೆಂಗಿನ ಸಸಿಗೆ ನೀರೆರೆದು ಭತ್ತದ ತೆನೆಗೆ ಹಾಲೆರೆದು ಗಣ್ಯರು ಕೃಷಿ ಮೇಳಕ್ಕೆ ಚಾಲನೆ ನೀಡಿದರು.
ಬೀದರ್‍ನ ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಶಿವಪ್ರಕಾಶ್ ಎಸ್.ಎಂ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ. ಅಭಯಚಂದ್ರ ಜೈನ್ ಹಿಂದಿನ ಕಾಲದಲ್ಲಿ ರೈತರು ಗೇಣಿ ಪಾವತಿಸುವುದರ ಜತೆಗೆ ಬಡ್ಡಿಯ ರೂಪದಲ್ಲಿ ಪೊಲಿ ನೀಡುತ್ತಿದ್ದ ಕಾಲವಿತ್ತು. ಈಗ ಕೃಷಿಯ ಯಾಂತ್ರಿಕತೆಯ ನೆರವನ್ನು ಬಳಸಿಕೊಂಡು ಹೆಚ್ಚಿನ ಲಾಭ ಪಡೆಯುವತ್ತ ಗಮನ ಹರಿಸಬೇಕು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಕಾನೂನುಗಳನ್ನು ಅಭಿವೃದ್ಧಿಪಡಿಸಿ ಕೃಷಿಕರಿಗೆ ಸಹಾಯ ಮಾಡಲು ಸರಕಾರ ಮುಂದಾಗಿದೆ ಎಂದರು.
ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕೃಷಿಯನ್ನು ಹೊರತು ಪಡಿಸಿ ಜೀವನವಿಲ್ಲ. ಕೃಷಿಕರಿಗೆ ಆಶಾದಾಯಕ ವಾತಾವರಣ ನಿರ್ಮಾಣವಾಗಬೇಕಿದೆ. ಯುವ ಜನತೆ ಕೃಷಿಯತ್ತ ಒಲವು ಬೆಳೆಸಿಕೊಳ್ಳುವಂತಾಗಬೇಕೆನ್ನುವುದು ಕೃಷಿಸಿರಿಯ ಆಶಯ ಎಂದರು. ಈ ಸಂದರ್ಭದಲ್ಲಿ ಸಸಿಗಳ ವಿತರಣೆಯ ಮೂಲಕ ಕಾಳಜಿ ಮೆರೆಯುತ್ತಿರುವ ಬ್ರಹ್ಮಾವರ ಪೇತ್ರಿಯ ಶ್ಯಾಮ್‍ಪ್ರಸಾದ್ ಅವರನ್ನು ಸಮ್ಮಾನಿಸಲಾಯಿತು.
ಹಿರಿಯ ಕೃಷಿ ತಜ್ಞ ಡಾ.ಎಲ್.ಸಿ.ಸೋನ್ಸ್, ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ತಿಪ್ಪೇಸ್ವಾಮಿ, ಜಿಲ್ಲಾ ಕೃಷಿ ಇಲಾಖೆಯ ಸಹನಿರ್ದೇಶಕ ಕೆಂಪೇಗೌಡ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಸಂಶೋಧನಾ ನಿರ್ದೇಶಕ ಡಾ.ಹನುಮಂತಪ್ಪ, ಜಿಲ್ಲಾ ತೊಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೀಶ್ ಎಚ್.ಆರ್, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಶಿವಕುಮಾರ್ ಮಗದ, ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಆರ್. ಸುಬ್ರಹ್ಮಣ್ಯ ದ.ಕ ಜಿಲ್ಲಾ ಕೃಷಿಕ ಸಮಾಜದ ಎಸ್.ಡಿ. ಸಂಪತ್ ಸಾಮ್ರಾಜ್ಯ, ಮೂಡುಬಿದಿರೆ ವಲಯ ರೈತ ಸಂಘದ ಧನಕೀರ್ತಿ ಬಲಿಪ ಉಪಸ್ಥಿತರಿದ್ದರು. ಅಂಡಾರು ಗುಣಪಾಲ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿ ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ರಾಜವರ್ಮ ಬೈಲಂಗಡಿ ವಂದಿಸಿದರು.

