ಮೂಡುಬಿದಿರೆ: ಶಿಕ್ಷಣ ಕ್ಷೇತ್ರದಲ್ಲಿ 51 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಮೂಡುಬಿದಿರೆಯ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿಯು (ನ್ಯಾಕ್) ಸತತ ಎರಡನೇ ಬಾರಿಗೆ ‘ಎ’ ಶ್ರೇಣಿ ಮಾನ್ಯತೆಯನ್ನು ನೀಡಿರುತ್ತದೆ.
ಸೆಪ್ಟೆಂಬರ್ 13 ಮತ್ತು 14ರಂದು ಮೂರನೇ ಆವರ್ತದ ಪರಿಶೀಲನೆಗಾಗಿ ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್ ಸಮಿತಿಯ ಅಧ್ಯಕ್ಷ ಪ್ರೊ. ಅರವಿಂದ ಕುಮಾರ್ ದಾಸ್, ಸದಸ್ಯರಾದ ಪ್ರೊ. ದಿಲೀಪ್ ಮೋಹಿತ್, ಡಾ. ವಿ. ಸುಜಾತಾ ಅವರನ್ನು ಒಳಗೊಂಡ ತಂಡವು ಕಾಲೇಜಿನ ವಿವಿಧ ವಿಭಾಗಗಳು, ಮೂಲ ಸೌಕರ್ಯಗಳು, ಅಳವಡಿಸಿಕೊಂಡಿರುವ ಪಠ್ಯಕ್ರಮ, ಬೋಧನಾ ವಿಧಾನ, ಸಂಶೋಧನೆ, ವಿಸ್ತರಣಾ ಕಾರ್ಯ, ಕಲಿಕಾ ಸೌಲಭ್ಯಗಳು, ಪಠ್ಯೇತರ ಚಟುವಟಿಕೆಗಳು ಮತ್ತು ಆಡಳಿತ ವ್ಯವಸ್ಥೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸುವುದರ ಜೊತೆಗೆ ಈಗಿನ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ಹಾಗೂ ಶಿಕ್ಷಕೇತರರ ಜೊತೆ ವಿಚಾರ ವಿನಿಮಯ ಮಾಡಿತ್ತು.

