ಮೂಡುಬಿದಿರೆ: ಬಹುವರ್ಷಗಳ ಬೇಡಿಕೆಯಾದ, ಪುತ್ತಿಗೆ ಅರಬ್ಬೀ ಅಣೆಕಟ್ಟನ್ನು ಅತ್ಯಾಧುನಿಕವಾಗಿ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಯ ಮೂಲಕ ರೂ.1 ಕೋಟಿಯ ಮೊತ್ತವನ್ನು ಮುಂದಿನ ಬಜೆಟ್‍ನಲ್ಲಿ ಕಾಯ್ದಿರಿಸುವುದಾಗಿ ಮೂಡಬಿದಿರೆ ಕ್ಷೇತ್ರ ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರಕಟಿಸಿದರು. ಪಾಲಡ್ಕ ಚರ್ಚ್‍ನ ಲೊಯೆಲಾ ಹಾಲ್‍ನಲ್ಲಿ ಶನಿವಾರ ಮುಸ್ಸಂಜೆ ಹೊತ್ತಲ್ಲಿ ನಡೆದ, ಪುತ್ತಿಗೆ ಅರಬ್ಬೀ ಅಣೆಕಟ್ಟು ಮತ್ತು ಪಾಲಡ್ಕ ತೋಡು ದುರಸ್ತಿ ಕಾಮಗಾರಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ` ಪಾಲಡ್ಕ ಚರ್ಚ್ ಧರ್ಮಗುರುಗಳ ನೇತೃತ್ವದಲ್ಲಿ ರಾಜಕೀಯ ರಹಿತವಾಗಿ ನಡೆದ ಈ ಕಾಮಗಾರಿ ನಾಡಿಗೇ ಮಾದರಿಯಾಗಿದೆ; ಧರ್ಮಗುರುಗಳು ಮುಂದಾಳತ್ವ ವಹಿಸಿದರೆ ಎಂಥ ಜನಪರ ಸೇವಾ ಕಾರ್ಯವನ್ನು ನಡೆಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ’ ಎಂದು ಶ್ಲಾಘಿಸಿದರು.ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅಣೆಕಟ್ಟಿನಲ್ಲಿ ಆಧುನಿಕ ತಾಂತ್ರಿಕತೆಯ ಕ್ರೆಸ್ಟ್ ಗೇಟ್‍ಗಳನ್ನು ಅಳವಡಿಸಿಕೊಡಿ ಎಂದು ಅಣೆಕಟ್ಟು ದುರಸ್ತಿ ಹಾಗೂ ಪಾಲಡ್ಕ ತೋಡು ದುರಸ್ತಿ ಸಮಿತಿ ಸಂಚಾಲಕ, ಪಾಲಡ್ಕ ಚರ್ಚ್‍ನ ರೆ.ಫಾ.ಮೈಕಲ್ ಐವನ್ ರೊಡ್ರಿಗಸ್ ಶಾಸಕರಲ್ಲಿ ಕೋರಿಕೆ ಸಲ್ಲಿಸಿದರು. ಕಾಮಗಾರಿಯಲ್ಲಿ ಪಾಲ್ಗೊಂಡ ಸರ್ವ ಸಮುದಾಯಗಳ ಮಂದಿಯ ಸೇವಾ ಮನೋಭಾವ ಸ್ಮರಣೀಯವಾದುದು ಎಂದು ಅವರು ಹೇಳಿದರು.

mbd_nov6_1

ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ ಅವರು, ಕಳೆದ ವರ್ಷ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದ್ದುದನ್ನು ಗಮನಿಸಿದ ಚರ್ಚ್ ಧರ್ಮಗುರುಗಳು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು 11 ದಿನಗಳ ಕಾಲ ನಡೆಸಿದ ಕಾಮಗಾರಿಯಲ್ಲಿ ಸ್ವತ: ಫಾದರ್ ಅವರೇ ಶ್ರಮಿಕರೊಂದಿಗೆ ಬೆರೆತುಕೊಂಡಿದ್ದದ್ದು ಚರಿತ್ರೆಯಲ್ಲಿ ದಾಖಲಾಗುವ ಸಂಗತಿ’ಯಾಗಿದೆ; ಈ ತೋಡಿನ ದುರಸ್ತಿಗೆ ಜಿ.ಪಂ.ನಿಂದ ಗರಿಷ್ಟ ಮೊತ್ತ ಒದಗಿಸಲು ಪ್ರಯತ್ನಿಸುವೆ’ ಎಂದು ಹೇಳಿದರು. ಹಿಂದೂ ಬಾಂಧವರು ಈ ಹಿಂದೆ ನಡೆಸಿದ್ದ ರಕ್ತದಾನ ಶಿಬಿರದಲ್ಲಿ ಈ ಧರ್ಮಗುರುಗಳು ತಾವೇ ಮೊದಲಾಗಿ ರಕ್ತ ನೀಡಿರುವುದು ಸೌಹಾರ್ದಕ್ಕೊಂದು ಮಾದರಿ ಎಂದು ಸುಚರಿತ ಸ್ಮರಿಸಿಕೊಂಡರು. ಊರವರೇ ಆದ ನಿವೃತ್ತ ಮುಖ್ಯ ಶಿಕ್ಷಕ ಆ್ಯಂಡ್ರ್ಯೂ ಡಿ’ಸೋಜ, ಪುತ್ತಿಗೆ ವ್ಯ.ಸೇ., ಸಂ. ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಪುತ್ತಿಗೆ ಮಾಜಿ ಉಪಾಧ್ಯಕ್ಷೆ ಮೆಟಿಲ್ಡಾ ಕರ್ಡೋಜಾ ಮೊದಲಾದವರು ಮಾತನಾಡಿ ಇತಿಹಾಸ ನಿರ್ಮಿಸಿದ, ಧರ್ಮಗುರುಗಳ ಸುದೂರದೃಷ್ಟಿಯ ಯೋಜನೆಯಲ್ಲಿ ಪಾಲ್ಗೊಂಡ ಸಾರ್ಥಕತೆಯನ್ನು ವ್ಯಕ್ತಪಡಿಸಿದರು.
ಸಮ್ಮಾನ:
ರೆ.ಫಾ.ಮೈಕೆಲ್ ಐವನ್ ರೋಡ್ರಿಗಸ್ ಅವರನ್ನು ಊರವರು, ಹರಿಪ್ರಸಾದ್, ನಾರಾಯಣ, ಸುಧಾಕರ, ಅವಿಲ್, ಜಯಂತ್ ಮೊದಲಾದವರ ಮುತುವರ್ಜಿಯಲ್ಲಿ ಅತಿಥಿಗಳ ಉಪಸ್ಥಿತಿಯಲ್ಲಿ ಸಮ್ಮಾನಿಸಿದರು. ಶ್ರಮದಾನದಲ್ಲಿ ಪಾಲ್ಗೊಂಡವರನ್ನು, ದಾನಿಗಳನ್ನು , ವಿವಿಧ ಪ್ರಾಯೋಜಕರನ್ನು ಶಾಸಕರು ಸಮಿತಿ ಪರವಾಗಿ ಶಾಲು ಹೊದೆಸಿ ಪುರಸ್ಕರಿಸಿದರು.

By Suddi9

Leave a Reply

Your email address will not be published. Required fields are marked *