ಉಳ್ಳಾಲ : ದೇಶಪ್ರೇಮವು ವಿಶ್ವಾಸದ ಒಂದು ಭಾಗ. ಪರಿಸರದವರಿಗೆ ಕಿರುಕುಳ ನೀಡುವವನು ಸಮುದಾಯದವನಲ್ಲ ಎಂದು ಸಾರುತ್ತಿರುವ ಇಸ್ಲಾಂ ಧರ್ಮದ ಯಾವುದೇ ಅನುಯಾಯಿ ದೇಶದ್ರೋಹದ ಕಾರ್ಯದಲ್ಲಿ ತೊಡಗಲಾರ ಎಂದು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅಲ್ ಹಾಜ್ ಅಬ್ದುಲ್ ರಶೀದ್ ರವರು ಹೇಳಿದರು.
ಅವರು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಳ್ಳಾಲದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿ.ಪ್ರಾ.ಶಾಲೆ ಹಾಗೂ ಸಯ್ಯಿದ್ ಮದನಿ ಪ್ರೌಢ ಶಾಲಾ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ನಾವು ಹಿರಿಯ ಪರಂಪರೆಯನ್ನು ಹೊಂದಿದವರು ಅವರನ್ನು ಗೌರವದಿಂದ ಕಾಣಬೇಕು ಎಂದರು.
ಭಾರತವು ವಿವಿಧ ಜಾತಿ ಮತ ಪಂಥಗಳಿಂದ ಕೂಡಿದ್ದರೂ ಸ್ವಾತಂತ್ರ್ಯ ಕ್ಕಾಗಿ ಐಕ್ಯದಿಂದ ಹೋರಾಡಿದರು. ನಮ್ಮ ಪೂರ್ವಜರು ಅವರ ಭಾವನೆಗಳಿಗೆ ಧಕ್ಕೆ ಬಾರದಂತೆ ಸರ್ವರನ್ನು ಗೌರವಿಸುವುದು ನಮ್ಮ ಧರ್ಮ ಎಂದು ಕರ್ನಾಟಕ ಪ್ರದೇಶ ಕಾಂಗೈ ಕಾರ್ಯದರ್ಶಿ ಎಂ.ಎ.ಗಫೂರ್ ರವರು ಹೇಳಿದರು. ಈ ಸಂದರ್ಭದಲ್ಲಿ ಉದ್ಯಮಿ ಜನಾಬ್ ಮಹಮ್ಮದ್ ಅಫ್ತಾರ್ ಹುಸೇನ್ ಹಾಗೂ ಎಂ.ಎ.ಗಫೂರ್ ರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಉಳ್ಳಾಲ ಕೇಂದ್ರ ಜಮಾಅತ್ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹಾ, ಶಾಲಾ ಸಂಚಾಲಕ ಜನಾಬ್ ಅಲ್ ಹಾಜ್ ಯು.ಹೆಚ್. ಮಹಮ್ಮದ್ ಹಳೆಕೋಟೆ, ಉಪಾಧ್ಯಕ್ಷ ಜನಾಬ್ ಯು.ಎನ್.ಇಬ್ರಾಹಿಂ, ರಝಾಕ್ ಸ್ವಾಲಿಹಾ, ಅಲ್ತಾಫ್ ಯು.ಹೆಚ್, ಇಸ್ಮಾಯಿಲ್ ಹಾಜಬ್ಬ, ಅಬ್ದುಲ್ ಕರೀಂ ಯು.ಹೆಚ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮೊಹಮ್ಮದ್ ರಫೀಕ್, ಟೆಸ್ಟ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಕೆ.ಎಂ.ಕೆ.ಮಂಜನಾಡಿ ಸ್ವಾಗತಿಸಿ ಶಿಕ್ಷಕಿ ಶಶಿಕಲಾ ಶೆಟ್ಟಿ ವಂದಿಸಿದರು. ಕುಮಾರಿ ತುಷಾರ ಕಾರ್ಯಕ್ರಮ ನಿರೂಪಿಸಿದರು.

