ಉಳ್ಳಾಲ: ನಿವೇಶನ ರಹಿತ 50 ಕುಟುಂಬಗಳಿಗೆ ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಗುರುತಿಸಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ ಸತ್ತಾರ್ ಹೇಳಿದ್ದಾರೆ. ಅವರು ಬೆಳ್ಮ ಗ್ರಾ.ಪಂ.ನಲ್ಲಿ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ ಸುಮಾರು 550 ಅರ್ಜಿಗಳು ಪಂಚಾಯಿತಿಗೆ ಸಲ್ಲಿಕೆಯಾಗಿದೆ. ಅವರಲ್ಲಿ ಅರ್ಹರನ್ನು ಗುರುತಿಸಿ 50 ಕುಟುಂಬಗಳಿಗೆ ನಿವೇಶನ ನೀಡಲು ತೀರ್ಮಾನಿಸಲಾಗಿದೆ. ಸರ್ವೆ ನಂ. 42 1 (ಎ) ನಲ್ಲಿ ಜಾಗವನ್ನು ಗುರುತಿಸಿ ಸಚಿವ ಯು.ಟಿ.ಖಾದರ್ ಅವರು ಸೂಚಿಸಿದಂತೆ ವಿತರಣೆಯಾಗಲಿದೆ. ಶೇ.18 ಮತ್ತು ಶೇ.4.75 ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.1 ನಿವೃತ್ತ , ಶೇ.2 ಹಿರಿಯ ನಾಗರಿಕರಿಗೆ, ಶೇ.1 ವಿಧವೆಯರಿಗೆ, ಶೇ.5 ಅಂಗವಿಕಲರಿಗೆ ಮೀಸಲಿರಿಸಿದಂತೆ ವಿತರಣೆ ನಡೆಯಲಿದೆ. ಈ ಕುರಿತು ಪರಿಶೀಲನೆಗೆ ಐದು ಮಂದಿಯ ನಿವೇಶನ ಸಮಿತಿಯನ್ನು ರಚಿಸಲಾಗಿದೆ. ಬೆಳ್ಮ ಗ್ರಾ.ಪಂನಲ್ಲಿರುವ ಇನ್ನಷ್ಟು ಇರುವ ಸರಕಾರಿ ಭೂಮಿಯನ್ನು ನಿವೇಶನ ರಹಿತರಿಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆ ಸಮ್ಮತಿ ಸೂಚಿಸಿದ ತಕ್ಷಣ ಇನ್ನಷ್ಟು ಕುಟುಂಬಗಳಿಗೆ ವಿತರಿಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು ಅರ್ಹರು ಬೆಳ್ಮ ಗ್ರಾ.ಪಂ.ಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.

ಮನೆ, ವಸತಿ, ವಾಣಿಜ್ಯ ಸಂಕೀರ್ಣ, ಅಂಗಡಿ ಮುಂಗ್ಗಟ್ಟುಗಳಿಂದ ಸಂಗ್ರಹವಾಗುತ್ತಿರುವ ತ್ಯಾಜ್ಯವನ್ನು ದಿನಂಪ್ರತಿ ವಾಹನದಲ್ಲಿ ಸಂಗ್ರಹಿಸಿ ಬೆಳ್ಮ ಗ್ರಾಮದ ಬಡ್ಕಬೈಲ್ ಎಂಬಲ್ಲಿ ತಾತ್ಕಾಲಿಕ ತ್ಯಾಜ್ಯ ಘಟಕಕ್ಕೆ ವಿಲೇವಾರಿ ನಡೆಸಲಾಗುತ್ತಿದೆ. ಸರ್ವೆ ನಂ 54 ರಲ್ಲಿ ಸರಕಾರಿ ಭೂಮಿಯನ್ನು ಗುರುತಿಸಲಾಗಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಮಂಜೂರಾತಿ ಸಿಕ್ಕ ಕೂಡಲೇ ಶಾಶ್ವತ ಘನ ತ್ಯಾಜ್ಯ ಸಂಗ್ರಹ ಘಟಕವನ್ನು ನಿರ್ಮಿಸಲಾಗುವುದು ಎಂದರು.
ಈ ಸಂದರ್ಭ ಬೆಳ್ಮ ಗ್ರಾ.ಪಂ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಪೂಜಾರಿ, ಸದಸ್ಯರಾದ ಯುಸುಫ್ ಬಾವ, ಉಸ್ಮಾನ್ ಅಕ್ಸಾ, ಮುಹಮ್ಮದ್ ಕಬೀರ್.ಡಿ, ಕೆ.ಎಚ್ ಹಸೈನಾರ್, ಎಂ.ಎ ಅಬ್ಬುಲ್ಲಾ, ಸತೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದರು.
