ಬಂಟ್ವಾಳ : ಪಾಣೆಮಂಗಳೂರು-ಆಲಡ್ಕ ಆಟದ ಮೈದಾನದಲ್ಲಿ ಪಾಳು ಬಿದ್ದಿರುವ ತೆರೆದ ಬಾವಿ ನಿರ್ಮಾಣದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಗುರುವಾರ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಶೇಠ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಬೆನ್ನಲ್ಲೆ ಶುಕ್ರವಾರ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಾಣೆಮಂಗಳೂರು ಗ್ರಾಮದ ಸವರ್ೆ ನಂಬ್ರ 28 ರ ಆಲಡ್ಕ ಮೈದಾನದಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ವಿಶೇಷ ಯೋಜನೆ-2002 ರಡಿ 6 ಮೀಟರ್ ವ್ಯಾಸ ಮತ್ತು 8 ಮೀಟರ್ ಆಳದ ಈ ತೆರೆದ ಬಾವಿಯನ್ನು ನಿರ್ಮಿಸಿ 2003 ರ ಎಪ್ರಿಲ್ 23 ರಂದು ಮುಂದಿನ ನಿರ್ವಹಣೆಗಾಗಿ ನಗರ ಪಂಚಾಯತ್ಗೆ ಹಸ್ತಾಂತರಿಸಿತ್ತು ಎಂಬುದನ್ನು ಸ್ಥಳೀಯರು ಲೋಕಾಯುಕ್ತ ಅಧಿಕಾರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಶುಕ್ರವಾರ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಹಾಗೂ ಕಂದಾಯ ನಿರೀಕ್ಷಕ ಚೆನ್ನಪ್ಪ ಗೌಡ ಅವರು ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿ ತೆರೆದ ಬಾವಿಯ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಯಿಸಿರುವ ಮುಖ್ಯಾಧಿಕಾರಿ ಮತ್ತಡಿ ಆಲಡ್ಕ ಮೈದಾನದಲ್ಲಿರುವ ತೆರೆದ ಬಾವಿಯನ್ನು ಪರಿಶೀಲನೆ ನಡೆಸಿದ್ದು, ಸಾರ್ವಜನಿಕರಿಗಿದು ಬಹಳ ಅಪಾಯಕರ ಸ್ಥಿತಿಯಲ್ಲಿದೆ. ಸೋಮವಾರವೇ ಇದಕ್ಕೆ ಸೂಕ್ತ ಮುಚ್ಚಳಿಕೆ ಹಾಕಿಸುವ ಕಾರ್ಯಕ್ಕೆ ಚಾಲನೆ ನೀಡಿ ಸುರಕ್ಷತಾ ಕ್ರಮವನ್ನು ಜರುಗಿಸುವುದಾಗಿ ತಿಳಿಸಿದ್ದಾರೆ.

