ಬಂಟ್ವಾಳ: `ವಾಸಕ್ಕೊಂದು ಸದನ ಸಮಾಜಕ್ಕೊಂದು ಭವನ’ ಎಂಬ ಕಲ್ಪನೆಯೊಂದಿಗೆ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ತೀರ, ಇಲ್ಲಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ 75ರ ತುಂಬೆ ಗ್ರಾಮದ ವಳವೂರು ಎಂಬಲ್ಲಿ ಸುಮಾರು ರೂ 18 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಆಕರ್ಷಕ ಗುತ್ತಿನ ಮನೆಯ ವಿನ್ಯಾಸದಿಂದ ಕೂಡಿದ ಹವಾನಿಯಂತ್ರಿತ ಸುಸಜ್ಜಿತ ‘ಬಂಟವಾಳದ ಬಂಟರ ಭವನ’ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಒಟ್ಟು ವಿಭಿನ್ನ ಶೈಲಿಯ ಐದು ಪ್ರತ್ಯೇಕ ಸಭಾಂಗಣ ಹೊಂದಿರುವ ಬಂಟರ ಭವನದಲ್ಲಿ 4 ಪ್ರತ್ಯೇಕ ಅತಿಥಿ ಗೃಹ ಸಹಿತ 1,200 ಆಸನ, 1000 ಆಸನ, 600 ಆಸನ, 250 ಆಸನ, 100 ಆಸನ ಹೀಗೆ ಪ್ರತ್ಯೇಕ ಸಭಾಂಗಣ ಹೊಂದಿದೆ.
ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಬದಿ ರೂ 18ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಬಂಟರ ಭವನ ಉದ್ಘಾಟನೆಗೆ ಸಿದ್ಧಗೊಂಡಿದೆ. ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಬದಿ ರೂ 18ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಬಂಟರ ಭವನ ಉದ್ಘಾಟನಾ ಸಮಾರಂಭಕ್ಕೆ ಸುಮಾರು ಆರು ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಕೊಳ್ಳುವಂತೆ ವಿಶಾಲವಾದ ಪೆಂಡಾಲ್ ನಿರ್ಮಿಸಲಾಗಿದೆ.

29ರಂದು ಹೊರೆದಿಬ್ಬಣ
ಇದೇ 29ರಂದು ಹೊರೆದಿಬ್ಬಣ ಮತ್ತು ಶೋಭಾಯಾತ್ರೆ ನಡೆಯಲಿದ್ದು, 30ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಸಹಿತ ವಿವಿಧ ಚಿತ್ರನಟ ನಟಿಯರು ಆಗಮಿಸಲಿದ್ದಾರೆ. ಇದರಿಂದಾಗಿ ಹೆದ್ದಾರಿಯುದ್ದಕ್ಕೂ ಗೂಡುದೀಪ ಸಹಿತ ವಿಭಿನ್ನ ಕಟೌಟ್ಗಳಿಂದ ಅಲಂಕರಿಸಲಾಗಿದ್ದು, ಸಭಾಂಗಣ ಬಳಿ ಮೂರು ಕಡೆ ಪ್ರತ್ಯೇಕ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಈ ಉದ್ಘಾಟನೆ ಸಂಭ್ರಮದ ಜೊತೆಗೆ ದೀಪಾವಳಿ ಹಬ್ಬದ ಸಂಭ್ರಮವೂ ಜೊತೆಗೂಡಿರುವುದು ಇಲ್ಲಿನ ಸಂಘದ ಸದಸ್ಯರಿಗೆ ಮತ್ತಷ್ಟು ಖುಷಿ ಕೊಟ್ಟಿದೆ ಎಂದು ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ತಿಳಿಸಿದ್ದಾರೆ.

