ವಿಟ್ಲ: ಚೆಲ್ಲಂಗಾರು ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಸ್ಪೋಟಕವಿಟ್ಟು ದನವೊಂದರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳಿಬ್ಬರನ್ನು ವಿಟ್ಲ ಪೊಲೀಸರು ಮಾಣಿ ಜಂಕ್ಷನ್‍ನಲ್ಲಿ ಸೋಮವಾರ ಬಂಧಿಸಿದ್ದಾರೆ.
ಇರ್ದೆ ದೂಮಡ್ಕ ಪೆಲತ್ತಾಜೆ ನಿವಾಸಿ ಶೀನಪ್ಪ ನಾಯ್ಕ (48), ಹಾಸನ ಹಾಲೂರು ನಿವಾಸಿ ವಿನೋದ್ ಶೆಟ್ಟಿ (30) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಕಾಡು ಹಂದಿ ಸೇರಿ ಪ್ರಾಣಿಗಳನ್ನು ಮಾಂಸದ ಆಸೆಯಲ್ಲಿ ಹತ್ಯೆಗೈಯ್ಯಲು ಸ್ಪೋಟಕಗಳನ್ನು ಬಳಸುತ್ತಿದ್ದು, ರಾತ್ರಿಯಾಗುತ್ತಿದ್ದಂತೆ ಗುಡ್ಡಗಳಲ್ಲಿ ಸ್ಪೋಟಕವಿಟ್ಟು ಬೆಳಗಾಗುತ್ತಿದ್ದಂತೆ ತೆಗೆದು ಬಿಡುತ್ತಿದ್ದರೆನ್ನಲಾಗಿದೆ.

ಹಸು ಮಾಲಕ ಚೆಲ್ಲಂಗಾರು ರಾಧಾಕೃಷ್ಣ ಮೂಲ್ಯ ಅವರು ನೀಡೀದ ದೂರಿನ ಹಿನ್ನಲೆಯಲ್ಲಿ ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕ ಅವರನ್ನು ಬಂಧಿಸಿ ವಿಚಾರಿಸಿದಾಗ ಇರ್ದೆ ದೂಮಡ್ಕ ಪೆಲತ್ತಾಜೆ ನಿವಾಸಿ ಶೀನಪ್ಪ ನಾಯ್ಕ ಸ್ಪೋಟಕ ತಯಾರಿಸಿ ಗುಡ್ಡದಲ್ಲಿ ಇರಿಸುತ್ತಿದ್ದು, ಇದಕ್ಕೆ ಹಾಸನ ಹಾಲೂರು ನಿವಾಸಿ ವಿನೋದ್ ಶೆಟ್ಟಿ ಸಹಕರಿಸಿ, ವಿಜಯ ಜಾನ್ ತನ್ನ ರಿಕ್ಷಾದಲ್ಲಿ ಇವರನ್ನು ಕರೆದು ತರುತ್ತಿದ್ದರೆಂಬ ಮಾಹಿತಿಯನ್ನು ನೀಡಿದ್ದರು.
ಶೀನಪ್ಪ ಅವರು ಗರ್ನಾಲ್, ಕೇಪು ಪಟಾಕಿಯನ್ನು ಸೇರಿಸಿ ಕಲ್ಲಿನ ನಡುವೆ ಕಟ್ಟಿ ಮಾಂಸ ತ್ಯಾಜ್ಯದಲ್ಲಿ ಇಟ್ಟು ಕಾಡ ಹಂದಿ ಬೇಟೆಗೆ ರಾತ್ರಿ ಸಮಯ ಗುಡ್ಡ ಪ್ರದೇಶದಲ್ಲಿಟ್ಟು ಬೇಟೆಯಾಡುತ್ತಿದ್ದರು. ಈ ಭಾಗದಲ್ಲಿ ಸುಮಾರು 6ತಿಂಗಳಿಂದ 6 ಬಾರಿ ಸ್ಪೋಟಕ ಇಟ್ಟಿದ್ದು 2 ಬಾರಿ ಹಂದಿ ಹತ್ಯೆಯಾಗಿದೆ. ಇದೇ ಆಸೆಯಲ್ಲಿ ಮತ್ತೆ ಸ್ಪೋಟಕ ಇಟ್ಟು ತೆಗೆಯಲು ಹೋದಾಗ ಅಲ್ಲಿರದೆ ದನ ತಿನ್ನುವಂತಾಗಿದೆ ಎಂದು ವಿಚಾರಣೆ ಸಮಯ ಶೀನಪ್ಪ ತಿಳಿಸಿದ್ದಾರೆ.
ಈ ಮಾಹಿತಿ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ, ಬಂಟ್ವಾಳ ಪೆÇಲೀಸ್ ಸಹಾಯಕ ಅಧೀಕ್ಷಕ ರವೀಶ್ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಸಹಾಯಕ ಉಪನಿರೀಕ್ಷಕರಾದ ಕೊರಗಪ್ಪ ನಾಯ್ಕ, ಆನಂದ ಪೂಜಾರಿ, ಸಿಬ್ಬಂದಿಗಳಾದ ಜಯಕುಮಾರ್, ಬಾಲಕೃಷ್ಣ , ಪ್ರವೀಣ್ ರೈ, ರಮೇಶ್ ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

