ಮೂಡುಬಿದಿರೆ: ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಗುವ ಅನ್ಯಾಯದ ವಿರುದ್ಧ ಸರ್ಕಾರವು ವಿವಿಧ ರೀತಿಯ ರಕ್ಷಣಾ ಕಾನೂನುಗಳನ್ನು ರೂಪಿಸಿವೆ. ಇದರ ಜೊತೆಗೆ ಇಲಾಖೆಗಳೂ ಮಹಿಳೆಯರ ರಕ್ಷಣೆಗೆ ಶ್ರಮಿಸುತ್ತಿವೆ. ಸಮಾಜಮುಖಿ ಸೇವೆ ಮಾಡುವ ಸಂಘ ಸಂಸ್ಥೆಗಳು ಸಾರ್ವಜನಿಕರ ಹಾಗೂ ಇಲಾಖೆಗಳ ಸಂಪರ್ಕ ಸೇತುವೆಯಾಗಬೇಕು ಎಂದುಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀಕಾಂತ್ ಸಾಲ್ಯಾನ್ ಹೇಳಿದರು.
ಶ್ರೀಗುರು ಮಹಿಳಾ ಮತ್ತು ಮಕ್ಕಳ ಹಕ್ಕು ಫೌಂಡೇಶನ್ನ ಮಾಹಿತಿ ಕೈಪಿಡಿಯನ್ನು ಅರಿಹಂತ ಕಾಂಪ್ಲೆಕ್ಸ್ನಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಟ್ರಸ್ಟಿನ ಅಧ್ಯಕ್ಷೆ ವಿದ್ಯಾ ಮಾತನಾಡಿ, ಸಂಸ್ಥೆಯ ಕಾರ್ಯಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ಈ ಕೈಪಿಡಿ ಹೊಂದಿದೆ. ಮಹಿಳೆಯರು ಮತ್ತು ಮಕ್ಕಳು ತೊಂದರೆಗೊಳಗಾದಲ್ಲಿ ಅವರಿಗೆ ನ್ಯಾಯ ದೊರಕಿಸುವಲ್ಲಿ ಸಹಕಾರವನ್ನು ಸಂಸ್ಥೆ ನೀಡುತ್ತದೆ. ಸಂಗೀತ ತರಗತಿಯನ್ನು ಸಂಸ್ಥೆಯ ಕಚೇರಿಯಲ್ಲಿ ನಡೆಸಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬೇಕೆಂದು ಹೇಳಿದರು.
ಮಧುರಾ ಭಟ್, ಸುನೀತಾ, ಗೌರವ ಕೋಶಾಧಿಕಾರಿ ಹೊನ್ನಯ್ಯ ಕಾಟಿಪಳ್ಳ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಮನೋಹರ ಭಟ್ ನಿರೂಪಿಸಿ, ಟ್ರಸ್ಟಿ ನಂದಾ ಪಾಯಸ್ ವಂದಿಸಿದರು.

