ಮೂಡುಬಿದಿರೆ: ಮೃತ್ಯಕೂಪವಾಗಿ ಪರಿವರ್ತನೆಗೊಂಡಿರುವ ಕಂಚಿಬೈಲು ಸಮೀಪದ ನಾಗುಂಡಿ ಹೊಳೆಯ ಅರ್ಬಿಕಟ್ಟೆ ಫಾಲ್ಸ್-ಎರುಗುಂಡಿಯಲ್ಲಿ ಹತ್ತು ದಿನಗಳ ಅಂತರದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಎರುಗುಂಡಿಯಲ್ಲಿ ಈಜಲು ಇಳಿದ ವಿದ್ಯಾರ್ಥಿಯೊಬ್ಬ ಭಾನುವಾರ ಸಂಜೆ ನೀರು ಪಾಲಾಗಿದ್ದಾನೆ. ಬಜ್ಪೆ ಕಿನ್ನಿಪದವು ನಿವಾಸಿ ಮುಸ್ತಾಫ್ ಎಂಬವರ ಪುತ್ರ, ಸುರತ್ಕಲ್ ಗೈಡ್ ಲೈನ್ ಟುಟೋರಿಯಲ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಫಾಜ್ (19) ಮೃತಪಟ್ಟವ.


ಈತ ಭಾನುವಾರ ಮಧ್ಯಾಹ್ನದ ವೇಳೆಗೆ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಬೈಲು ಸಮೀಪದ ಅರ್ಭಿಕಟ್ಟೆ ಫಾಲ್ಸ್(ಎರಡುಗುಂಡಿ) ಸ್ನೇಹಿತರ ಜೊತೆಗೆ ಈಜಲು ಬಂದಿದ್ದ. ಸ್ನೇಹಿತರು ಫಾಲ್ಸ್ ಬಳಿ ನೀರಿಗಿಳಿದ ಸಂದರ್ಭ ಈತ ಅಲ್ಲೇ ಗದ್ದೆ ಸಮೀಪವಿದ್ದ ನೀರಿಗೆ ಇಳಿದಿದ್ದಾನೆ. ನೀರಿನಲ್ಲಿ ಈಜಲು ಆಗದೆ ಮುಳುಗಿದ್ದು, ಕೈಮೇಲೆ ಮಾಡಿ ರಕ್ಷಿಸುವಂತೆ ಸ್ನೇಹಿತರನ್ನು ಕೂಗಿದ್ದಾನೆ. ಸ್ನೇಹಿತರು ತಕ್ಷಣ ಸ್ಥಳಕ್ಕೆ ಬಂದು, ಬಟ್ಟೆಯ ಮುಖಾಂತರ ಆತನನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಿಲ್ಲ. ನೀರಿನಲ್ಲಿ ಮುಳುಗಿ ಮೃತಪಟ್ಟ ಅರ್ಫಾಜ್ ಶವವನ್ನುಅಗ್ನಿಶಾಮಕದಳ ಮತ್ತು ಸ್ಥಳೀಯರು ಸೇರಿ ಮೇಲಕ್ಕೆತ್ತಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.








