ಮೂಡುಬಿದಿರೆ:ದಸರಾ ರಜೆಗೆ ಊರಿಗೆ ಬಂದವನೋರ್ವ ಸ್ನೇಹಿತರ ಜತೆಗೆ ಹೊಳೆಯಲ್ಲಿ ಏಡಿ ಹಿಡಿಯುವುದಕ್ಕೆ ಹೊರಟು ಕೊನೆಗೆ ನೀರುಪಾಲಾದ ದುರ್ಘಟನೆ ಬುಧವಾರ ಬೆಳಕಿಗೆ ಬಂದಿದೆ. ಕಳೆದ ಅ7ರಂದು ಈ ದುರ್ಘಟನೆ ನಡೆದಿತ್ತು. ಆದರೆ ಜತೆಗಿದ್ದ ಸ್ನೇಹಿತರು ಈ ವಿಷಯವನ್ನು ಮುಚ್ಚಿಟ್ಟ ಕಾರಣ ಯುವಕ ನಾಪತ್ತೆ ಎಂಬ ಪ್ರಕರಣ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣ ಮುಚ್ಚಿಟ್ಟರು.. :
ಈ ಘಟನೆ ನಡೆದಾಗ ತಕ್ಷಣ ಈತನೊಂದಿಗೆ ಬಂದಿದ್ದ ರಾಜೇಶ್, ನೀರಿಗೆ ಹಾರಿ ರಕ್ಷಿಸಲು ಪ್ರಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ನೀರುಪಾಲಾದ ಗಣೇಶ್ ಗೌಡ ಕಾಣದಿದ್ದಾಗ, ಅಲ್ಲಿಂದ ತೆರಳಿದ ಆತನ ಸ್ನೇಹಿತರು ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಗಣೇಶ್ ಗೌಡ ತಾಯಿ ಇವರಲ್ಲಿ ವಿಚಾರಿದಾಗಲೂ ಗಣೇಶ್ ತಮ್ಮೊಂದಿಗೆ ಅರ್ಧ ದಾರಿವರೆಗೆ ಬಂದು ಹಿಂದಿರುಗಿದ್ದ ಎಂದು ಸುಳ್ಳು ಹೇಳಿದ್ದರು. ಆದರೆ ಗಣೇಶ್ ಗೌಡ ಅವರ ತಾಯಿ ಮುತ್ತಮ್ಮ ಸ್ಥಳೀಯ ಜನಪ್ರತಿನಿಧಿಗಳ ಸಹಾಯದಿಂದ ಮಂಗಳವಾರ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು.

ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಕರಿಕುಮೇರು ನಿವಾಸಿ (ಕೊಂಪದವು ಸಮೀಪ) ಗಣೇಶ್ ಗೌಡ (25) ನೀರುಪಾಲಾದ ಯುವಕ. ತನ್ನ ಊರಿನ ಇತರ ಯುವಕರಾದ ರಾಜೇಶ್, ಕುಮಾರ್,ಸುನೀಲ್, ಶ್ರೀಕಾಂತ್ ಎಂಬವರೊಂದಿಗೆ ಬೆಂಗಳೂರಿನಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ, ವಾರದ ಹಿಂದೆ ದಸರಾ ರಜೆಯೆಂದು ಬಂದಿದ್ದ ಈತ ತನ್ನ ಸ್ನೇಹಿತರೊಂದಿಗೆ ಅ.7ರಂದು ಮಧ್ಯಾಹ್ನ ಪುತ್ತಿಗೆ ಹೊಳೆಗೆ ಏಡಿ ಹಿಡಿಯಲು ಬಂದಿದ್ದ. ಅಲ್ಲಿ ಏಡಿ ಸಿಗದ ಕಾರಣ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಬೈಲು ಸಮೀಪದ ನಾಗುಂಡಿ ಹೊಳೆಯ ಎರುಗುಂಡಿ ಜಲಪಾತ ವೀಕ್ಷಣೆಗೆ ನಾಗುಂಡಿ ಹೊಳೆಯ ಎರುಗುಂಡಿ ಜಲಪಾತ ವೀಕ್ಷಣೆಗೆ ಗೆಳೆಯರೊಂದಿಗೆ ತೆರಳಿದ್ದ. ಅಂದು ಜಲಪಾತ ರಭಸದಿಂದ ಹರಿಯುವ ಪಕ್ಕದಲ್ಲೇ ಬಂಡೆಯಲ್ಲಿ ಕುಳಿತಿದ್ದ ಈತ ಆಯತಪ್ಪಿ ಜಲಪಾತದ ಕೆಳಗೆ ಬಿದ್ದಿದ್ದಾನೆ.


ಗಣೇಶನ ಸ್ನೇಹಿತರನ್ನು ವಿಚಾರಿಸುವಾಗ ಆತ ನೀರುಪಾಲಾಗಿರುವುದು ಬೆಳಕಿಗೆ ಬಂದಿದೆ. ಗಣೇಶ್ ಗೌಡನ ಸ್ನೇಹಿತರಾದ ರಾಜೇಶ್ ಹಾಗೂ ಸುನೀಲ್ನನ್ನು ಬಜ್ಪೆ ಪೊಲೀಸರು ನಾಗುಂಡಿ ಹೊಳೆಯ ಫಾಲ್ಸ್ ಬಳಿ ಬುಧವಾರ ಮಧ್ಯಾಹ್ನ ವೇಳೆಗೆ ಕರೆ ತಂದು ಘಟನೆ ವಿವರಣೆ ಕೇಳಿದ್ದಾರೆ. ಬಜ್ಪೆ ಎಸ್ಐ ರಾಜಾರಾಂ, ಮೂಡುಬಿದಿರೆ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸ್ಥಳಕ್ಕೆ ಆಗಮಿಸಿದರು.


ಬಿಜೆಪಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಾಧ್ಯಕ್ಷ ಈಶ್ವರ್ ಕಟೀಲ್, ಅಭಿಲಾಷ್ ಕಟೀಲು, ಅರುಣ್ ಭಟ್, ರವಿ ಹಾಗೂ ಕರುಣಾಕರ ನೀರಿಗೆ ಇಳಿದು ಯುವಕ ಬಿದ್ದ ಸ್ಥಳದಲ್ಲೇ ಹುಡುಕುವಾಗ ಮೃತ ದೇಹ ಪತ್ತೆಯಾಗಿದೆ. ಆತನ ಪ್ಯಾಂಟ್ ಕಿಸೆಯೊಳಗಡೆ ಮದ್ಯದ ಬಾಟಲಿಗಳಿದ್ದು, ಈ ಕುರಿತು ಆತನ ಗೆಳೆಯರಲ್ಲಿ ವಿಚಾರಿಸುವಾಗ ಮದ್ಯಪಾನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಮೃತ ಗಣೇಶನ ತಂದೆ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ಗಣೇಶ್ ತಾಯಿ, ತಮ್ಮ ಹಾಗೂ ತಂಗಿಯನ್ನು ಅಗಲಿದ್ದಾರೆ.



