ಕಾರ್ಕಳ: ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಮತ್ತು ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ನಡೆದ ಕ್ಷೇಮ – ನಿಟ್ಟೆ ಸಿಪಿಆರ್ ಪ್ರಚಾರ ಅಭಿಯಾನದ ಸಮಾರೋಪ ಹಾಗೂ ವಿಶ್ವ ಹೃದಯ ದಿನದ ಆಚರಣೆ ನಿಟ್ಟೆಯ ಕೆ ಎಸ್ ಹೆಗ್ಡೆ ಮ್ಯಾನೇಜ್ಮೆಂಟ್ ಸಂಸ್ಥೆಯ ಸಭಾಂಗಣದಲ್ಲಿ ಅಕ್ಟೋಬರ್ 7ರಂದು ಶುಕ್ರವಾರ ಜರುಗಿತು.
ನಮ್ಮ ಜೀವನ ಶೈಲಿಯ ಬದಲಾವಣೆ ಹಾಗೂ ಮಾನಸಿಕ ಒತ್ತಡದಿಂದ ಹೃದ್ರೋಗ ಸಮಸ್ಯೆ ಅಧಿಕವಾಗುತ್ತಿದೆ. ಭಾರತದಲ್ಲಿ ಕ್ಯಾನ್ಸರ್ ಮತ್ತಿತರ ಭೀಕರ ರೋಗಗಳಿಗಿಂತ ಹೃದ್ರೋಗಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಿದೆ. ಸಂತುಲಿತ ಆಹಾರ, ನೆಮ್ಮದಿಯ ಜೀವನ ಮತ್ತು ದುಶ್ಚಟಗಳಿಂದ ದೂರವಿರುವುದರಿಂದ ಹೃದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದು ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ಶ್ರೀ ವಿನಯ ಹೆಗ್ಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾ ತಿಳಿಸಿದರು.
ಕ್ಷೇಮ ವೈದ್ಯಕೀಯ ವಿದ್ಯಾಲಯದ ವೈದ್ಯರು ಇದೇ ಸೆಪ್ಟೆಂಬರ್ 3ರಿಂದ ಪ್ರಾರಂಭಿಸಿ ಅಕ್ಟೋಬರ್ 4ರ ವರೆಗಿನ ಒಂದು ತಿಂಗಳಲ್ಲಿ ನಿಟ್ಟೆ ವಿದ್ಯಾ ಸಂಸ್ಥೆಗಳ ಐದು ಸಾವಿರಕ್ಕೂ ಅಧಿಕ (5244) ವಿದ್ಯಾರ್ಥಿಗಳಿಗೆ ಸಿಪಿಆರ್ ನಲ್ಲಿ (CPR-ಕಾರ್ಡಿಯೋ ಪಲ್ಮನರಿ ರಿಸುಸಿಟೇಷನ್) (ಹಠಾತ್ ಹೃದಯ ಸ್ತಂಭನವಾದಾಗ ಕೊಡುವ ತುರ್ತು ಚಿಕಿತ್ಸೆ) ತರಬೇತಿ ನೀಡಿದ್ದು, ಅದೊಂದು ಜಾಗತಿಕ ದಾಖಲೆಯಾಗಲಿರುವ ಸಂಭವವಿದೆ. ತರಬೇತಿ ಪಡೆದವರ ನಡುವೆ ಸಿಪಿಆರ್ ಕೌಶಲ್ಯದಲ್ಲಿ ಸ್ಪರ್ಧೆ ನಡೆಸಿ ಅತ್ಯಂತ ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ವಿತರಿಸಲಾಯಿತು. ಕ್ಷೇಮ ಆಸ್ಪತ್ರೆ ಮತ್ತು ಕಾಲೇಜಿನ ವೈದ್ಯರ ಸಿಪಿಆರ್ ನ ಮಹತ್ವವನ್ನು ಸಾರುವ ಕಿರುನಾಟಕ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಕ್ಷೇಮ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಕೆ ಸುಬ್ರಮಣ್ಯಮ್ ‘ಹೃದ್ರೋಗ ತಡೆಗಟ್ಟುವುದು ಹೇಗೆ?’ ಎಂಬ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ ಯಸ್ ರಮಾನಂದ ಶೆಟ್ಟಿ ಭಾಗವಹಿಸಿದರು. ಕ್ಷೇಮದ ಡೀನ್ ಡಾ ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿ, ಕ್ಷೇಮ – ನಿಟ್ಟೆ ಸಿಪಿಆರ್ ಅಭಿಯಾನದ ಸಂಯೋಜಕ ಡಾ ಶ್ರೀಪಾದ ಜಿ ಮೆಹೆಂದಳೆ ವಂದಿಸಿದರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ನಿರಂಜನ ಚಿಪ್ಳೂಣ್ಕರ್, ಜಸ್ಟಿಸ್ ಕೆ ಎಸ್ ಹೆಗ್ಡೆ ಮ್ಯಾನೇಜ್ಮೆಂಟ್ ಸಂಸ್ಥೆಯ ನಿರ್ದೇಶಕ ಡಾ ಶಂಕರನ್, ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪೊಲಿಟೆಕ್ನಿಕ್ ನ ಪ್ರಾಂಶುಪಾಲ ಡಾ ಪ್ರಶಾಂತ್ ಕುಮಾರ್, ಕ್ಷೇಮ ಕಾಲೇಜಿನ ರಿಜಿಸ್ಟ್ರಾರ್ ಡಾ ಜಯಪ್ರಕಾಶ್ ಶೆಟ್ಟಿ, ಡಾ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ ವೀಣಾ ಬಿ ಕೆ, ಕ್ಷೇಮ – ನಿಟ್ಟೆ ಸಿಪಿಆರ್ ಅಭಿಯಾನದ ಡಾ ಗಾಯತ್ರಿ ಭಟ್, ಡಾ ಹರ್ಷ ಎಚ್ ಎನ್ ಮುಂತಾದವರು ಉಪಸ್ಧಿತರಿದ್ದರು. ಡಾ ಸುಮಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

