ಬಂಟ್ವಾಳ: ತಾಲೂಕು ಕಚೇರಿಯ ದಾಖಲೆ ಪತ್ರಗಳ ದಾಸ್ತಾನು ಕೊಠಡಿಗೆ ದಿಢೀರನೆ ನೀರು ನುಗ್ಗಿದ ಪರಿಣಾಮ ಹಲವು ಅಮೂಲ್ಯ, ಹಳೆ ಕಡತಗಳು ಒದ್ದೆಯಾಗಿ ನಾಶಗೊಂಡಿದೆ.

ಮಿನಿ ವಿಧಾನ ಸೌಧಾ ನಿರ್ಮಾನಕ್ಕಾಗಿ ಹಳೆ ತಾಲೂಕು ಕಚೇರಿ ಕಟ್ಟಡವನ್ನು ಕೆಡವಲಾಗಿತ್ತಾದರೂ ಇದರ ಪಕ್ಕದಲ್ಲೇ ಇದ್ದ ಹಳೆ ಕಡತಗಳ ಹಾಗೂ ದಾಖಲೆಪತ್ರಗಳ ದಾಸ್ತಾನು ಕೊಠಡಿಯನ್ನು ಹಾಗೇ ಇರಿಸಿಕೊಳ್ಳಲಾಗಿತ್ತು. ಇದರಲ್ಲಿ ಹಳೆ ಕಡತಗಳನ್ನು ಯಥಾವತ್ತಾಗಿ ಜೋಡಿಸಿಡಲಾಗಿದೆ. ಮಿನಿ ವಿಧಾನ ಸೌಧದ ಕಾಮಗಾರಿ ಪ್ರಗತಿಯಲ್ಲಿದ್ದು ಇದಕ್ಕಾಗಿ ಮೇಲ್ಭಾಗದಲ್ಲಿ ನೀರಿನ ಟ್ಯಾಂಕನ್ನು ಇರಿಸಲಾಗಿದೆ. ಇದಕ್ಕೆ ಮಂಗಳವಾರ ರಾತ್ರಿ ಹೊತ್ತು ಮಿನಿ ವಿಧಾನ ಸೌಧದ ಮೇಲಂತಸ್ಥಿನಲ್ಲಿ ಕಾಂಕ್ರೀಟೀಕರಣ ಕಾಮಗಾರಿಯು ನಡೆಯುತ್ತಿತ್ತು. ಇದಕ್ಕಾಗಿ ಟ್ಯಾಂಕಿಯಲ್ಲಿ ನೀರು ತುಂಬಿಸಲಾಗುತ್ತಿತ್ತು. ಈ ನೀರು ಟ್ಯಾಂಕಿಯನ್ನು ತುಂಬಿ ಹೊರ ಸೂಸಿದ್ದು ಈ ಘಟನೆ ಕಾರ್ಮಿಕರ ಅರಿವಿಗೆ ಬಂದಿರಲಿಲ್ಲ.

ಇತ್ತ ಪಕ್ಕದ ಚರಂಡಿಯಲ್ಲಿ ನೀರು ತುಂಬಿ ಇದಕ್ಕೆ ತಾಗಿಕೊಂಡೇ ಇರುವ ತಾಲೂಕು ಕಚೇರಿಯ ಕಡತಗಳ ದಾಸ್ತಾನು ಕೊಠಡಿಯೊಳಗೆ ನೀರು ನುಗ್ಗಿದೆ. ಬೆಳಗ್ಗೆ ತಾಲೂಕು ಕಚೇರಿಯ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಕೊಠಡಿಯ ಬೀಗ ತೆರೆದಾಗ ಕೆಲಭಾಗದಲ್ಲಿ ಜೋಡಿಸಲಾಗಿದ್ದ ಕಡತಗಳನ್ನು ಆವರಿಸಿದ್ದು ಹಲವು ಅಮೂಲ್ಯ ಕಡತಗಳು ಒದ್ದೆಯಾಗಿ ಹಾನಿಗೊಂಡಿದೆ.

ತಕ್ಷಣ ಮಿನಿ ವಿಧಾನ ಸೌಧದ ನಿರ್ಮಾಣ ಕಾರ್ಯದಲ್ಲಿ ನಿರತರಾದ ಕಾರ್ಮಿಕರು ಚರಂಡಿಯಲ್ಲಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದರು. ಆದರೆ ಕೊಠಡಿಯೊಳಗೆ ನುಗ್ಗಿರುವ ನೀರು ಹಾಗೆಯೇ ಉಳಿದಿದೆ.
