ಬಂಟ್ವಾಳ: ರೈಲು ನಿಲ್ದಾಣಕ್ಕೆ ಆವರಣಗೋಡೆ ನಿರ್ಮಾಣ, ಸ್ವಾಗತ ಕಮಾನು ನಿರ್ಮಾಣ, ಪ್ರಯಾಣಿಕರ ಕಾಯುವ ಕೊಠಡಿಯ ನವೀಕರಣ, ಶೌಚಾಲಯ ನಿರ್ಮಾಣ ಹೀಗೆ ಬಿ.ಸಿ.ರೋಡಿನಲ್ಲಿರುವ ರೈಲು ನಿಲ್ದಾಣದ ಖದರ್ ಏಕಾಏಕಿ ಬದಲಾಗುತ್ತಿದೆ.
ಸಾರ್ವಜನಿಕರಿಂದ , ರೈಲ್ವೇ ಪ್ರಯಾಣಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ರೈಲ್ವೇ ನಿಲ್ದಾಣ ದಿನದಿಂದ ದಿನಕ್ಕೆ ಹೆಚ್ಚು ಸುಂದರಗೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.ಹೌದು.. ಅ.1 ರಂದು ಕೇಂದ್ರ ರೈಲ್ವೇ ಸಚಿವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಅಭಿವೃದ್ದಿ ಕಾರ್ಯಗಳು ತರಾತುರಿಯಲ್ಲಿ ನಡೆಯುತ್ತಿದೆ. ಹಲವು ವರ್ಷಗಳ ಹಿಂದೇಯೇ ಈ ಬಗ್ಗೆ ರೈಲ್ವೇ ಇಲಾಖೆಯ ಸಂಬಂಧಪಟ್ಟ ವಿಭಾಗಕ್ಕೆ ಬೇಡಿಕೆಯ ಮನವಿಯನ್ನು ಸಲ್ಲಿಸಿದ್ದರೂ ಆಗದ ಅಭಿವೃದ್ದಿ ಕಾರ್ಯಗಳು ದಿಡೀರ್ ಆಗಿ ಆರಂಭಗೊಂಡು ವೇಗ ಪಡೆದುಕೊಂಡಿದೆ.
ಪುತ್ತೂರಿನಲ್ಲಿ ಆದರ್ಶ ರೈಲು ನಿಲ್ದಾಣದ ಉದ್ಘಾಟನೆಗೆ ಆಗಮಿಸುವ ಸಚಿವರು, ಬಿ.ಸಿ.ರೋಡು , ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಬಳಿಕ ಧರ್ಮಸ್ಥಳಕ್ಕೆ ತೆರಳಿ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಸಚಿವರ ಭೇಟಿ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ರೈಲು ನಿಲ್ದಾಣ ದ ನೋಟ ಬದಲಾಗುತ್ತಿದೆ. ಅವ್ಯವಸ್ಥೆಯನು ಸುಸಜ್ಜಿತಗೊಳಿಸಿ ಸಚಿವರ ಮೆಚ್ಚುಗೆ ಗಳಿಸಬೇಕೆನ್ನುವುದು ಇಲಾಖಾಕಾರಿಗಳ ಲೆಕ್ಕಾಚಾರ. ಹೀಗಾಗಿ ಬಿ.ಸಿ.ರೋಡಿನ ರೈಲು ನಿಲ್ದಾಣದಲ್ಲಿ ಮಳೆಯನ್ನು ಲೆಕ್ಕಿಸದೆ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ಆವರಣ ಗೋಡೆ ನಿರ್ಮಾಣ, ಪ್ರಯಾಣಿಕರನ್ನು ಸ್ವಾಗತಿಸಿಲು ಸ್ವಾಗತ ಕಮಾನು ನಿರ್ಮಾಣ, ರೈಲು ನಿಲ್ದಾಣದ ಕಚೇರಿಗೆ ಛಾವಣಿ ಬದಲಾವಣೆ, ಪ್ರಯಾಣಿಕರು ಕಾಯುವ ಕೊಠಡಿ ನವೀಕರಣ, ಶೌಚಾಲಯ ನವೀಕರಣ ದಂತಹಾಅಗತ್ಯದ ಕಾಮಗಾರಿಗಳು ಭರದಿಂದ ನಡೆಯುತ್ತಿರುವುದು ರಐಲ್ವೇ ಪ್ರಯಾಣಿಕರಿಗೆ ಖುಷಿಕೊಟ್ಟಿದೆ. ರೈಲ್ವೇ ಸಚಿವರ ಭೇಟಿಯ ನೆಪದಲ್ಲಾದರೂ ಬಿ.ಸಿ.ರೋಡಿನ ರೈಲು ನಿಲ್ದಾಣಕ್ಕೆ ನವೀಕರಣ ಭಾಗ್ಯ ಒದಗಿಬಂದಿರುವುದು ಸಂತಸದ ಸಂಗತಿ ಎನ್ನುತ್ತಾರೆ ಬಿ.ಸಿ.ರೋಡಿನ ರೈಲ್ವೇ ಪ್ರಯಾಣಿಕ ವಸಂತ್
ಅಭಿವೃದ್ದಿ ಕಾರ್ಯಗತ: ಪ್ರಯಾಣಿಕರ ಅನುಕೂಲದ ದೃಷ್ಟುಂದ ರೈಲು ಬಳಕೆದಾರರ ಸಂಘಟನೆಯ ಮೂಲಕ ರೈಲ್ವೇ ಇಲಾಖೆಗೆ ಸಲ್ಲಿಸಿದ ಬೇಡಿಕೆಯ ಮನವಿಯಂತೆ ಬಂಟ್ವಾಳದ ರೈಲು ನಿಲ್ದಾಣದಲ್ಲಿ ಹಲವು ಅಭಿವೃದ್ದಿ ಕಾರ್ಯಗಳು ನಡೆದಿದೆ. 24 ಕೋಚ್ಗಳು ನಿಲ್ಲುವ ಪ್ಲಾಟ್ಪಾರಂ ವಿಸ್ತರಣೆ ಕಾರ್ಯ ಆಗಿದೆ. ಪ್ಲಾಟ್ಪಾರಂಗೆ ಮೇಲ್ಛಾವಣಿ ಹಾಕಲಾಗಿದೆ. ಕ್ಯಾಂಟೀನ್ ಬೇಡಿಕೆಯನ್ನು ಮುಂದಿಡಲಾಗಿದ್ದು ಅದೂ ಕಾರ್ಯರಂಭಗೊಂಡಿದೆ. ಆನ್ಲೈನ್ ಟಿಕೆಟ್ ಕೌಂಟರ್ ಕೂಡ ಬೇಡಿಕೆಯಂತೆ ಕಾರ್ಯರಂಭಗೊಂಡಿದೆ. ಒಟ್ಟಿನಲ್ಲಿ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ರೈಲು ಬಳಕೆದಾರರ ಸಂಘಟನೆಯ ಮನವಿಗೆ ರೈಲು ಇಲಾಖೆಯೂ ಸಕರಾತ್ಮಕವಾಗಿ ಸ್ಪಂದಿಸಿರುವುದು ತೃಪ್ತಿತಂದಿದೆ ಎನ್ನುವುದು ಕುಕ್ಕೆ ಶ್ರೀ ಸುಬ್ರಹ್ಮಣ್ಯ- ಮಂಗಳೂರು ರೈಲು ಬಳಕೆದಾರರ ಹಿತರಕ್ಷಣ ಸಮಿತಿ ಸಂಚಾಲಕ ಸುದರ್ಶನ್ ಪುತ್ತೂರು ಅವರ ಅಭಿಪ್ರಾಯ. .
ಮಂತ್ರಿಗಳು ಬರುತ್ತಾರೆಂದರೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳುತ್ತಾರೆ. ಹಲವು ವರ್ಷಗಳಲ್ಲಿ ಆಗದ ಕೆಲಸಗಳು ತಕ್ಷಣ ಕಾರ್ಯಾರಂಭಗೊಂಡಿದೆ. ಬಂಟ್ವಾಳ ರೈಲು ನಿಲ್ದಾಣದಲ್ಲಿ ರೈಲು ಬಳಕೆದಾರರ ಸಂಘಟನೆಯ ಮನವಿಯಂತೆ ಈಗಾಗಲೇ ಕೆಲವು ಅಭಿವೃದ್ದಿ ಕಾರ್ಯಗಳು ನಡೆದಿವೆ. ಇನ್ನೂ ಕೆಲವು ಅಭಿವೃದ್ದಿ ಕಾರ್ಯಗಳು ಆಗಲು ಬಾಕಿ ಇವೆ. ಸಚಿವರ ಆಗಮನದ ಹಿನ್ನಲೆಯಲ್ಲಿ ನಿಲ್ದಾಣದ ಪರಿಸರ ಸುಂದರೀಕರಣಗೊಳ್ಳುತ್ತಿದೆ
– ಸುದರ್ಶನ್ ಪುತ್ತೂರು, ಸಂಚಾಲಕರು.

