ಬಂಟ್ವಾಳ: ಬಂಟ್ವಾಳ ಇಲ್ಲಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಕಳೆದ 20 ದಿನಗಳ ಹಿಂದೆ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿದ್ದ ಪಿಡಿಒ ವೆಂಕಟೇಶ ಎಂಬವರು ಅಲ್ಲಿಗೆ ಹೋಗದೆ ಇಲ್ಲೇ ಕರ್ತವ್ಯ ನಿರ್ವಹಿಸುವುದನ್ನು ಖಂಡಿಸಿ ಅವರ ಕಚೇರಿಗೆ ಆಡಳಿತಾರೂಢ ಸದಸ್ಯರು ಬೀಗ ಜಡಿದ ಘಟನೆ ಮಂಗಳವಾರ ನಡೆದಿದೆ.
ಕಳೆದ 2 ತಿಂಗಳ ಹಿಂದೆಯಷ್ಟೇ ಜಿಲ್ಲೆಯಾದ್ಯಂತ ಒಟ್ಟು 13 ಮಂದಿ ಪಿಡಿಒಗಳಿಗೆ ಸಾಮೂಹಿಕ ವರ್ಗಾವಣೆಗೊಳಿಸಲಾಗಿದ್ದು, ಅಲ್ಲಿನ ಗ್ರಾಮಸಭೆ ಪೂರ್ಣಗೊಂಡ ಬಳಿಕ ಇವರಿಗೆ ಸ್ಥಳ ನಿಯೋಜನೆಗೊಳಿಸಲಾಗಿತ್ತು ಎನ್ನಲಾಗಿದೆ. ಇದೇ ರೀತಿ ಕಳೆದ 20 ದಿನಗಳ ಹಿಂದೆಯಷ್ಟೇ ಇಲ್ಲಿನ ಪಿಡಿಒ ವೆಂಕಟೇಶ ಅವರನ್ನು ಸಜಿಪಮುನ್ನೂರು ಗ್ರಾಮ ಪಂಚಾಯಿಗೆ ವರ್ಗಾವಣೆಗೊಳಿಸಿ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಇದಕ್ಕೆ ಬದಲಾಗಿ ಮೂಡುಬಿದ್ರೆ ಸಮೀಪದ ಪಾಲಡ್ಕ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನೋಣು ಎಂಬವರನ್ನು ರಾಯಿ ಪಿಡಿಒ ಆಗಿ ಬಡ್ತಿಗೊಳಿಸಿ ಅಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ನಿರ್ದೇಶನದಂತೆ ಬಂಟ್ವಾಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಅವರು ಆದೇಶ ನೀಡಿದ್ದರು.
ಇದೀಗ ಪಿಡಿಒ ವೆಂಕಟೇಶ ಅವರು ಸಜಿಪಮುನ್ನೂರು ಗ್ರಾಮ ಪಂಚಾಯಿತಿಗೆ ತೆರಳದ ಹಿನ್ನೆಲೆಯಲ್ಲಿ ಬಡ್ತಿಗೊಂಡು ಬಂದಿದ್ದ ನೋಣು ಅವರನ್ನು ಬಂಟ್ವಾಳ ತಾಲ್ಲೂಕು ಪಂಚಾಯಿತಿನಲ್ಲೇ ನಿಯೋಜಿಸಲಾಗಿದೆ. ಈಗಾಗಲೇ ಕೆಲವೊಂದು ಅವ್ಯವಹಾರ ಮತ್ತು ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತನಿಖೆ ನಡೆಸಿ ಒಂದು ವರ್ಷ ವೇತನ ಬಡ್ತಿ ತಡೆ ಶಿಕ್ಷೆ ವಿಧಿಸಿದ್ದಾರೆ. ಇಲ್ಲಿನ ಕೈತ್ರೋಡಿ ಪರಿಸರದಲ್ಲಿ ಕುಡಿಯುವ ನೀರಿನ ಪಂಪ್ಹೌಸ್ಗೆ ಏಕಾಯೇಕಿ ಬೀಗ ಜಡಿದು ನಾಗರಿಕರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪಿಡಿಒ ವರ್ಗಾವಣೆಗೂ ಆಗ್ರಹಿಸಿದ್ದರು. ಈ ವರ್ಗವಣೆಗೊಂಡ ಪಿಡಿಒ ತೆರಳದಿದ್ದಲ್ಲಿ ಯಾವುದೇ ಗ್ರಾಮಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಆಡಳಿತಾರೂಢ ಪಂಚಾಯಿತಿ ಸದಸ್ಯರು ಗ್ರಾಮ ಸಭೆಯನ್ನೂ ಬಹಿಷ್ಕರಿಸಿದ್ದರು. ಇದೀಗ ಪಂಚಾಯಿತಿನಿಂದ ಬಿಡುಗಡೆಗೊಂಡ ಬಳಿಕವೂ ವರ್ಗಾವಣೆ ಆದೇಶ ಧಿಕ್ಕರಿಸಿ ಆಡಳಿತಾತ್ಮಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಚೇರಿಗೆ ಬೀಗ ಜಡಿದಿರುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ತಿಳಿಸಿದ್ದಾರೆ.
ಈ ನಡುವೆ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಮತ್ತು ಸದಸ್ಯರಾದ ಹರೀಶ ಆಚಾರ್ಯ ಮತ್ತು ರಾಘವ ಅಮೀನ್ ತನ್ನ ಕಚೇರಿಗೆ ಬೀಗ ಜಡಿದಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಮಂಗಳವಾರ ಪಿಡಿಒ ದೂರು ಸಲ್ಲಿಸಿದ್ದಾರೆ. ಆದರೆ ತಡೆಯಾಜ್ಞೆ ಪ್ರತಿ ನೀಡದೆ ದೂರು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅವರನ್ನು ವಾಪಾಸು ಕಳುಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

