ಕಾರ್ಕಳ: ನಿಕರಿಸುವ ಹೃದಯಕ್ಕಿಂತ, ಕಣ್ಣೀರಿಡುವ ನಯನಗಳಿಗಿಂತ ಸಹಾಯ ನೀಡುವ ಕೈಗಳೇ ಮೇಲು ಎಂಬುದನ್ನು ನಮ್ಮ ಯುವಕರ ತಂಡ ತೋರಿಸಿಕೊಟ್ಟಿದೆ. ಮಾನವೀಯತೆ ಮರೀಚಿಕೆಯಾಗಿರುವ ಕಾಲಘಟ್ಟದಲ್ಲಿ `ಕುಲಾಲ್ ವರ್ಲ್ಡ್’ ಎಂಬ ಸಮಾನಮನಸ್ಕ ಯುವಕರನ್ನು ಹೊಂದಿರುವ ವಾಟ್ಸಪ್ ಗ್ರೂಪಿನ ಸದಸ್ಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬೆಳ್ತಂಗಡಿ ಇಂದಬೆಟ್ಟು ಗ್ರಾಮದ ತನಿಯಪ್ಪ ಮೂಲ್ಯ ಅವರಿಗೆ ಒಟ್ಟು ಒಂದು ಲಕ್ಷದ ಹನ್ನೊಂದು ಸಾವಿರದ ನೂರಾ ಹನ್ನೊಂದು ರೂ. (1,11,111 ) ಸಂಗ್ರಹಿಸಿ ನೀಡುವ ಮೂಲಕ ಅವರ ನೋವಿಗೆ ಆಸರೆಯಾಗಿದ್ದಾರೆ. ಆ ಮೂಲಕ ನಮ್ಮಲ್ಲಿ ಮಾನವೀಯತೆ ಇನ್ನೂ ಜೀವಂತವಿದೆ ಎಂದು ತೋರಿಸಿಕೊಟ್ಟಿದ್ದಾರೆ.
`ಕುಲಾಲ್ ವರ್ಲ್ಡ್’ ವಾಟ್ಸಪ್ ಗ್ರೂಪಿನ ಸ್ಥಾಪಕ ದಿನೇಶ್ ಬಂಗೇರ ಇರ್ವತ್ತೂರು ಹಾಗೂ ಅಡ್ಮಿನ್ ಗಳಾದ ನರೇಶ್ ಕೆ ಟಿ, ಹೇಮಂತ್ ಕುಮಾರ್, ಸದಸ್ಯರಾದ ಗುರುಪ್ರಸಾದ್, ಕಿರಣ್ ಕುಲಾಲ್ ಮುಂತಾದವರ ನೇತೃತ್ವದಲ್ಲಿ ತನಿಯಪ್ಪ ಮೂಲ್ಯ ಅವರ ಚಿಕಿತ್ಸೆಗೆ ಹಣ ಸಂಗ್ರಹ ನಡೆಸಲಾಗಿತ್ತು. ಇದಕ್ಕೆ ನೂರಾರು ಊರ-ಪರವೂರ ಹೃದಯವಂತ ದಾನಿಗಳು ಸ್ಪಂದಿಸಿದ್ದರು. ಸಂಗ್ರಹವಾದ ಹಣವನ್ನು ಇಂದು (ಸೆ. 25) ಬೆಳಿಗ್ಗೆ ಇಂದಬೆಟ್ಟಿನಲ್ಲಿರುವ ತನಿಯಪ್ಪ ಮೂಲ್ಯ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.
ಈ ಸಂದರ್ಭ ನರೇಶ್ ಕೆ. ಟಿ, ಹೇಮಂತ ಕುಮಾರ್ ಕಿನ್ನಿಗೋಳಿ ,ಗುರುಪ್ರಸಾದ್, ರಾಕೇಶ್ ಕೊಣಾಜೆ, ಉಮೇಶ್ ಕುಲಾಲ್ ಗುರುವಾಯನಕೆರೆ, ನಿತೇಶ್ ಕುಕ್ಯಾನ್ ಏಳಿಂಜೆ , ರಮೇಶ್ ಕುಮಾರ್ ವಗ್ಗ , ವಿಮಲಾ ಕುಲಾಲ್ ಕಂಚಿಂಜ, ದಯಾನಂದ ಕಿನ್ನಿಗೋಳಿ, ದಾಮೋದರ ಗುರುವಾಯನಕೆರೆ, ಲೋಕೇಶ್ ಕುಲಾಲ್ ಗುರುವಾಯನಕೆರೆ ಮುಂತಾದವರು ಉಪಸ್ಥಿತರಿದ್ದರು.
ಹಣ ಸ್ವೀಕರಿಸಿ ಮಾತನಾಡಿದ ತನಿಯಪ್ಪ ಮೂಲ್ಯ ಮತ್ತು ಅವರ ಪತ್ನಿ `ಚಿಕಿತ್ಸೆಗೆ ಹಣವಿಲ್ಲದೆ ಕಂಗಾಲಾಗಿದ್ದೆವು. ಈ ಸಂದರ್ಭ ದೇವರಂತೆ ಬಂದು ಸಮಾಜ ಬಾಂಧವರು ನೆರವಾಗಿದ್ದಾರೆ. ಇವರ ಉಪಕಾರ ಎಂದೆಂದಿಗೂ ಮರೆಯಲಾಗದು’ ಎಂದು ಹೇಳಿ ಕಣ್ಣೀರೊರೆಸಿಕೊಂಡರು.
ಈ ಹಿಂದೆ ಇದೆ ಗ್ರೂಪಿನ ವತಿಯಿಂದ ಅಪಘಾತದಿಂದ ಸೊಂಟದ ಬಲವನ್ನು ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಮೂಡಬಿದ್ರೆ ಒಂಟಿಕಟ್ಟೆ ಐದು ಸೆಂಟ್ಸ್ ನಾಗವೇಣಿ ನಿವಾಸದ ಎಂ.ಕೆ ಭಾಸ್ಕರ್ ಮೂಲ್ಯ ಅವರಿಗೆ ಹಣ ಸಂಗ್ರಹಿಸಿ 30,462 ರೂ. ಹಾಗೂ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಕಾರ್ಕಳ ತಾಲೂಕು ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಸಂತೋಷ ಮೂಲ್ಯ ಅವರ ನವಜಾತ ಶಿಶುವಿನ ಚಿಕಿತ್ಸೆಗೆ ಒಟ್ಟು 76,200 ರೂಪಾಯಿಯನ್ನು ಸಂಗ್ರಹಿಸಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
