ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಕಲ್ಪನೆಯಂತೆ ಆರಂಭವಾಗಿರುವ ಸ್ವಚ್ಛ ಭಾರತ್ ಅಭಿಯಾನದಡಿ 2019 ಕ್ಕೆ ಇಡೀ ದೇಶವನ್ನು ಬಯಲು ಶೌಚಾಲಯ ಮುಕ್ತವನ್ನಾಗಿ ಮಾರ್ಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಕೇಂದ್ರ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ.
ಶುಕ್ರವಾರ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಸುಮಾರು 11.11 ಕೋಟಿ ಜನರು ಶೌಚಾಲಯದ ವ್ಯವಸ್ಥೆ ಇಲ್ಲದಿದ್ದು ಇವರಿಗೆ ಹಂತ ಹಂತವಾಗಿ ಶೌಚಾಲಯ ನಿರ್ಮಿಸಲು ಸರಕಾರ ಯೋಜನೆ ಹಾಕಿಕೊಂಡಿದೆ ಎಂದರು.

2017-18 ನೇ ಸಾಲಿನಲ್ಲಿ 200,2018-19ರ ಸಾಲಿನಲ್ಲಿ 400 ಹಾಗೂ 2019-20ರ ಸಾಲಿಗೆ ಅಕ್ಟೋಬರ್ ತಿಂಗಳಿನಲ್ಲಿ 200ಜಿಲ್ಲೆಗಳಲ್ಲಿ ಹೀಗೆ ಒಟ್ಟು 671 ಜಿಲ್ಲೆಗಳನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸಲು ಸರಕಾರ ಉದ್ದೇಶಿಸಿದೆ ಎಂದ ಸಚಿವರು ಇದು ಸಂಪೂರ್ಣ ಯಶಸ್ವಿಯಾಗುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವು ಅತೀ ಅಗತ್ಯವಿದೆ ಎಂದು ಹೇಳಿದರು.
ದೇಶದ 100 ಐತಿಹಾಸಿಕ ಸ್ಥಳಗಳನ್ನು ಪೈಲೆಟ್ ಯೋಜನೆಯಡಿ ಅಭಿವೃದ್ಧಿಗೊಳಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು ಈಗಾಗಲೆ ಗೌವಾಟಿಯ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಗಿದೆ. 2019 ರ ವೇಳೆಗೆ ಇವುಗಳ ಕಾಮಗಾರಿ ಪೂರ್ಣಗೊಳ್ಳಲಿದೆ. ತನ್ಮೂಲಕ ನರೇಂದ್ರ ಮೋದಿಯವರ ಕನಸು ನನಸಾಗಲಿದೆ ಎಂದ ಸಚಿವರು ಅಕ್ಟೋಬರ್ 2 ರಂದು ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಹಾಗೂ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನಾಚರಣೆಯನ್ನಾಗಿ ಆಚರಿಸಲು ಸರಕಾರ ನಿರ್ಧರಿಸಿದೆ. ಹಾಗಯೇ 2022 ಕ್ಕೆ ದೇಶದಲ್ಲಿ ಶೇ.90 ರಷ್ಟು ನಳ್ಳಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
*ಕಾವೇರಿ –ರಾಜ್ಯ ಸರ್ಕಾರದ ವೈಫಲ್ಯ
ಕಾವೇರಿ ವಿಚಾರದಲ್ಲಿ ಕರ್ನಾಟಕ ಸರ್ಕಾರದ ತಪ್ಪು ಹೆಜ್ಜೆ ಹಾಗೂ ವೈಫಲ್ಯದಿಂದಾಗಿ ವಿವಾದ ಉಲ್ಭಣಿಸಿ, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗುವಂತಾ ಅಹಿತಕರ ಘಟನೆಗಳು ನಡೆದಿವೆ. ಹೀಗಾಗಿ ಒಟ್ಟು ಕಾವೇರಿ ವಿವಾದದಲ್ಲಿ ಸರ್ಕಾರವೇ ತಪ್ಪಿತ್ಥರು, ಆದರೆ ಈಗ ಬೇರೆ ಪಕ್ಷಗಳ ಮೇಲೆ ಗೂಬೆ ಕೂರಿಸಲು ಪ್ರತ್ನಿಸುತ್ತಿದ್ದಾರೆ . ಇಂದು ತುರ್ತು ಅಧಿವೇಶನ ಕರೆದಿದ್ದಾರೆ, ಬಿಜೆಪಿ ಕೂಡ ಈ ಬಗ್ಗೆ ಒತ್ತಾಯಿಸುತ್ತಲೇ ಬಂದಿತ್ತು. ಹಾಗಾಗಿ ಮುಂದಿನ ಬೆಳವಣಿಗೆಗಳ ಬಗ್ಗೆ ಅಧಿವೇಶನದವರೆಗೂ ಕಾಯಬೇಕಾಗಿದೆ ಎಂದರು.ಇದೇ ವೇಳೆ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು, ಗೋಳ್ತಮಜಲಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಈ ಭಾಗದ ಅಮ್ಟೂರು, ಗೋಳ್ತಮಜಲು, ಬಾಳ್ತಿಲ, ನರಿಕೊಂಬು, ಶಂಬೂರು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅವರ ಭರವಸೆ ನೀಡಿದರು.
ಜಿ ಲ್ಲಾ ಬಿಜೆಪಿ ಯ ಎಸ್‍ಸಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು.
