ಬಂಟ್ವಾಳ:ತಾಲ್ಲೂಕಿನ ತುಂಬೆ ನೇತ್ರಾವತಿ ನದಿಯಲ್ಲಿ ನಿರ್ಮಾಣಗೊಂಡ ಎರಡನೇ ಅಣೆಕಟ್ಟೆಯಲ್ಲಿ ಎಂಟು ಮೀಟರ್ ಎತ್ತರಕ್ಕೆ ಸಂಬಂಧಿಸಿದಂತೆ ಮುಳುಗಡೆ ಭೀತಿ ಎದುರಿಸುತ್ತಿರುವ ಜಮೀನಿನಲ್ಲಿ ಸಂಬಂಧಪಟ್ಟ ರೈತ ಮುಖಂಡರಿಗೆ ಮಾಹಿತಿ ನೀಡಿ ಮುಂದಿನ ಹತ್ತು ದಿನಗಳೊಳಗೆ ಪುನರ್ ಸರ್ವೆ ಕಾರ್ಯ ಪೂರ್ಣಗೊಳಿಸುವುದಾಗಿ ಮಂಗಳೂರು ಮನಪಾ ಕಾರ್ಯನಿರ್ವಾಹಕ ಎಂಜಿನಿಯರ್ ಗುರುರಾಜ್ ಕೆ.ಮರಳಿಹಳ್ಳಿ ತಿಳಿಸಿದ್ದಾರೆ.
ತಾಲ್ಲೂಕಿನ ತುಂಬೆ ಅಣೆಕಟ್ಟೆ ಮುಳುಗಡೆ ಪ್ರದೇಶ ಪುನರ್ ಸರ್ವೆ ಪ್ರಯುಕ್ತ ಬಂಟ್ವಾಳದಲ್ಲಿ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ನಡೆದ ಸಮಾಲೋಚನಾ ಸಭೆಯಲ್ಲಿ ರೈತ ಮುಖಮಡರು ಮತ್ತು ಜನಪ್ರತಿನಿಧಿಗಳಿಗೆ ಅವರು ಸಿದ್ಧಪಡಿಸಿದ ನಕ್ಷೆ ಪ್ರದರ್ಶಿಸಿ ವಿವರಿಸಿದರು. ಈ ಬಗ್ಗೆ ರೈತರ ಉಪಸ್ಥಿತಿಯಲ್ಲಿ ಸರ್ವೆ ನಡೆಸಿ ಅಂತಿಮ ಗಡಿ ಗುರುತು ಹಾಕುವುದರ ಜೊತೆಗೆ ಪ್ರತೀ 150 ಮೀಟರ್ಗೆ ಒಂದರಂತೆ ಪ್ರತ್ಯೇಕ ಗುರುತು ಹಾಕಿ ರೈತರಿಗೆ ಸ್ಪಷ್ಟ ಮಾಹಿತಿ ನೀಡಲಾಗುತ್ತದೆ. ಆ ಬಳಿಕ ಪರಿಹಾರಧನ ಬಗ್ಗೆ ನಿರ್ಧರಿಸಬಹುದು ಎಂದು ಅವರು ತಿಳಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ರೈತರಿಗೆ ಯಾವುದೇ ಮುಚ್ಚುಮರೆ ಇಲ್ಲದೆ ಸ್ಪಷ್ಟ ಮಾಹಿತಿ ನೀಡಿದಾಗ ಮಾತ್ರ ನಿಮಗೆ ಅವರಿಂದಲೂ ಸಹಕಾರ ದೊರೆಯುತ್ತದೆ ಎಂದರು.
ಬಂಟ್ವಾಳ ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪ್ರಮುಖರಾದ ಮನೋಜ್ ಆಳ್ವ, ಯೂಸುಫ್ ಕರಂದಾಡಿ, ಪರಮೇಶ್ವರ ಎಂ. ಸಂತ್ರಸ್ತರ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಭಟ್, ಕಳ್ಳಿಗೆ ಗ್ರಾಮ ಪಂಚಾಯಿತಿ ಸದಸ್ಯ ಮಧುಸೂದನ ಶೆಣೈ, ಸಮಿತಿ ಸದಸ್ಯ ರಾಜಾ ಬಂಟ್ವಾಳ ಚರ್ಚೆಯಲ್ಲಿ ಪಾಲ್ಗೊಂಡರು.ಮನಪಾ ಎಂಜಿನಿಯರ್ ವಿಶಾಲ್ನಾಥ್, ರಾಜೇಶ್ ಕುಮಾರ್, ಸರ್ವೆ ಕಂಪೆನಿ ಯೋಗೇಶ್ ನಾಯಕ್, ಕಣ್ಣನ್, ಸವರ್ೆ ಮೇಲ್ವಿಚಾರಕ ನಿಸಾರ್ ಅಹ್ಮದ್ ಉಪಸ್ಥಿತರಿದ್ದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ ವಂದಿಸಿದರು.
