ವಾಮಂಜೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ, ಹಾಗೂ ಎಸ್. ಡಿ. ಎಂ. ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇವರ ಸಂಯುಕ್ತ ಆಶ್ರಯದಲ್ಲಿ ದ. ಕ. ಜಿಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರ ಕುಸ್ತಿ ಪಂದ್ಯಾಟವು ಮಂಗಳಜ್ಯೋತಿ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಭಾಗವಹಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದ ಮಂಗಳೂರು ಉತ್ತರದ ಶಾಸಕರಾದ ಶ್ರೀ ಮೊೈದಿನ್‍ಭಾವರವರು ಗರಡಿ ಮನೆಗಳಲ್ಲಿ ಬೆಳೆದು ಬಂದ ಕುಸ್ತಿ ಆಟವು ಇಂದು ಎಲ್ಲರ ಮನವನ್ನು ಗೆದ್ದು ಸಾಕ್ಷಿ ಮಲಿಕ್ ಮೂಲಕ ಒಲಿಂಪಿಕ್‍ನಲ್ಲಿ ಪದಕವನ್ನು ಪಡೆಯುವಂತಹ ದೊಡ್ಡ ಕೀರ್ತಿ ಭಾರತಕ್ಕೆ ಬಂದಿದೆ. ಕುಸ್ತಿ ಪಂದ್ಯಾಟವು ವಿಜಯನಗರ ಅರಸರ ಕಾಲದಲ್ಲಿ ಉತ್ಕೃಷ್ಟ ಮಟ್ಟಕ್ಕೆ ಏರಿತ್ತು. ದೇಹದಾಡ್ರ್ಯತೆಯನ್ನು ಕಾಪಾಡಿಕೊಂಡು, ನಡೆ ಶುಚಿ, ನುಡಿ ಶುಚಿಯಾಗಿ ಬಾಳಿ ಬದುಕಲು ಕುಸ್ತಿ ಎಲ್ಲಾ ಶಾಲೆಗಳಲ್ಲಿ ಅನುಷ್ಟಾನ ಅಗತ್ಯವಾಗಿದೆ ಎಂದು ಹೇಳಿದರು.


ಉಪನಿರ್ದೆಶಕರಾದ ಶ್ರೀ ವಾಲ್ಟರ್ ಡಿ’ಮೆಲ್ಲೊರವರು ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ, ಪ್ರಾಚೀನ ಕಾಲದಿಂದಲೂ ಜನರ ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದ ಕುಸ್ತಿ ಪಂದ್ಯಾಟವು ಅಗೊಳಿ ಮಂಜಣ್ಣ, ಕೋಟಿ ಚೆನ್ನಯ್ಯರ ಕಾಲದಲ್ಲಿ ಹೆಚ್ಚು ಆಕರ್ಷಣೀಯವಾಗಿತ್ತು. ಗ್ರಾಮದ ಜನರ ಶಕ್ತಿ ಕೇಂದ್ರಗಳಾಗಿ ಬೆಳೆದ ಗರಡಿ ಮನೆಗಳು, ಜನರ ರಕ್ಷಣೆ ಮತ್ತು ಶ್ರದ್ದಾ ಭಕ್ತಿಯ ತಾಣಗಳಾಗಿ ಜನರ ಆಶೋತ್ತರ ಈಡೇರಿಸುವ ಕೇಂದ್ರಗಳಾಗಿ ಮಾರ್ಪಾಡಾಗಿದ್ದವು. ಇತ್ತೀಚಿನ ದಿನಗಳಲ್ಲಿ ಭಾರತವು ಕುಸ್ತಿ ಪಂದ್ಯಾಟದ ಮೂಲಕ ಜಗತ್ತಿನಲ್ಲಿ ಗುರುತಿಸುವಂತೆ ಆಗಿದೆ ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆಯನ್ನು ಮಂಗಳಜ್ಯೋತಿ ಶಾಲಾ ಆಡಳಿತಾಧಿಕಾರಿ ಶ್ರೀ ಗಣೇಶ್ ಭಟ್‍ರವರು ವಹಿಸಿಕೊಂಡು, ಕುಸ್ತಿ ಆಟವು ಕೇವಲ ಪಂದ್ಯಾಟಕ್ಕೆ ಮಾತ್ರ ಸೀಮಿತವಾಗಿರದೆ ಮಾನವೀಯತೆಯನ್ನು ಮೆರೆದ ವಿಚಾರಗಳನ್ನು ನೆನಪಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪಂದ್ಯಾಟದಲ್ಲಿ ಜಿಲ್ಲೆಯ 14 ಮತ್ತು 17 ವಯೋಮಿತಿಯ ಬಾಲಕರ 20 ವಿಭಾಗಗಳಲ್ಲಿ ಸುಮಾರು 326 ಸ್ಪರ್ಧಿಗಳು ಹಾಗೂ ತೀರ್ಪುಗಾರರು ಭಾಗವಹಿಸಿದ್ದರು.


ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಕೆ. ಹೆಚ್. ನಾಯಕ್, ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಅವರ್ ಲೇಡಿ ಆಪ್ ಪಾಂಪೈ ಶಾಲೆ ಕೈಕಂಬದ ಮುಖ್ಯೋಪಾಧ್ಯಾಯರಾದ ಶ್ರೀ ಮಹೇಶ್ ಶೆಟ್ಟಿ, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಶ್ರೀ ಡೋಲ್ಪಿ ಸಿಕ್ವೇರಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾರ್ಯೆಟ್ ಮಸ್ಕರೇನ್ಹಸ್, ಜಿಲ್ಲಾ ಸಂಘದ ಜೊತೆ ಕಾರ್ಯದರ್ಶಿ ಶ್ರೀ ತ್ಯಾಗಂ, ತಾಲೂಕು ಕಾರ್ಯದರ್ಶಿ ಶ್ರೀ ಬಾಲಕೃಷ್ಣ , ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀ ಲಕ್ಶ್ಮೀ ನಾರಾಯಣ ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಲಿಲ್ಲಿ ಪಾಯ್ಸ್ ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಡೊನಾಲ್ಡ್ ಲೋಬೊ ವಂದಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಶೇಖರ್ ಕಡ್ತಲ ಕಾರ್ಯಕ್ರಮ ನಿರೂಪಿಸಿದರು.


