ಬಂಟ್ವಾಳ: ಫರಂಗಿಪೇಟೆ ನಿವಾಸಿ, ಎಫ್. ಅಬ್ಬಾಸ್ ಎಂಬವರ ಮನೆಗೆ ನುಗ್ಗಿದ ಆರು ಮಂದಿಯ ತಂಡ ಅವರ ಸಹಿತ ಪತ್ನಿ, ಪುತ್ರಿ, ಮೊಮ್ಮಗಳಿಗೆ ಹಲ್ಲೆ ನಡೆಸಿದ್ದಲ್ಲದೆ ಮನೆಗೆ ಕಲ್ಲೆಸೆದು ಹಾನಿ ಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಅಬ್ಬಾಸ್ ಅವರ ಅಳಿಯ ವಿ.ಎಚ್. ಶರೀಫ್ ಮತ್ತು ಆತನ ಎರಡನೇ ಪತ್ನಿ ಆಯಸ್ತುಲ್ಲಾ ಬುಸ್ರಾ, ಅವಳ ತಾಯಿ ಶಫಿಯಾ, ತಂದೆ ದೋಣಿ ಹಮೀದ್ ಹಾಗೂ ಆರೋಪಿಯ ಸಹೋದರಿ ಅಬೂಸಾ, ರೇಶ್ಮಾ, ಸಂಬಂಧಿಯಾದ ರಹಿಮಾನ್ ಎಂದು ಹೆಸರಿಸಲಾಗಿದ್ದು ಇವರ ವಿರುದ್ದ ದೂರು ನೀಡಲಾಗಿದೆ.
ಅಬ್ಬಾಸ್ ಅವರ ಕೈ ಮೂಳೆ ಮುರಿತಕ್ಕೊಳಗಾಗಿದೆ. ಪತ್ನಿ ಮೈಮುನಾ ಮೈಗೆ ಅಲ್ಲಲ್ಲಿ ಗಾಯವಾಗಿದ್ದು, ಪುತ್ರಿ ರೆಹನಾರಿಗೆ ಕಾಲಿನ ಮೂಳೆ ಮುರಿತವಾಗಿದೆ. ಕಿರಿಯ ಸಹೋದರಿ ಶೈಮಾಳಿಗೆ ತುಳಿತದಿಂದ ಗಾಯಗಳಾಗಿದ್ದು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆರೋಪಿ ಶರೀಫ್ ಕೆಲವು ವರ್ಷಗಳ ಹಿಂದೆ ಪಿರ್ಯಾದಿಯವರ ಪುತ್ರಿ ರೆಹನಾಳನ್ನು ಮದುವೆಯಾಗಿದ್ದು ಗಂಡನ ಮನೆಯವರ ಕಿರುಕುಳದಿಂದ ಕಳೆದ ಐದು ತಿಂಗಳಿಂದ ತವರಿಗೆ ಬಂದು ಉಳಿದುಕೊಂಡಿದ್ದಾರೆ. ಆರೋಪಿಯು ಗಾಂಜಾ ವ್ಯಾಪಾರಿಯಾಗಿದ್ದು ಆತನ ವಿರುದ್ದ ಮಂಗಳೂರು ಗ್ರಾಮಾಂತರ ಹಾಗೂ ಕಂಕನಾಡಿ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
