ಮೂಡುಬಿದಿರೆ: ಇರುವೈಲ್‍ನ ಫಲ್ಗುಣಿ ಯುವಕ ಮಂಡಲದ ಆಶ್ರಯದಲ್ಲಿ ಇರುವೈಲು ಗ್ರಾಮದ ಆಯ್ದ 25 ಮಂದಿ ಫಲಾನುಭವಿಗಳಿಗೆ ಉಚಿತ ಹಣ್ಣಿನ ಸಸಿ ವಿತರಿಸುವ 29 ನೇ ವರ್ಷದ ಸಮಾರಂಭವು ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜರುಗಿತು.

mdb_aug16_5 (2)

mdb_aug16_5 (1)
ಮೂಡುಬಿದಿರೆ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಹಣ್ಣಿನ ಗಿಡಗಳನ್ನು ಸಾಕಲು ನೀಡುವ ಮೂಲಕ ಫಲಗಳನ್ನು ಪಡೆಯುವ ಜತೆಗೇ ಸಸ್ಯ ಸಂವರ್ಧನೆಯ ಕಾರ್ಯವೂ ಸಾಧ್ಯ. ಮರಗಿಡಗಳಿದ್ದಲ್ಲಿ ನೀರಿರುತ್ತದೆ ಎಂಬುವುದನ್ನು ಅರಿತು ನಾವೆಲ್ಲರೂ ಸಂಭಾವ್ಯ ಜಲಕ್ಷಾಮವನ್ನು ಇದಿರಿಸಲು ಇಂಥ ಕಾರ್ಯಕ್ರಮಗಳನ್ನು ಸಫಲಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಇರುವೈಲು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪೂವಪ್ಪ ಸಾಲಿಯಾನ್ ಮಾತನಾಡಿ, 25 ವರ್ಷಗಳಿಂದ ಇರುವೈಲಿನ ಫಲಾನುಭವಿಗಳಿಗೆ ಉಚಿತವಾಗಿ ತೆಂಗಿನ ಸಸಿ ನೀಡುತ್ತ, ಬಳಿಕದ ಈ ನಾಲ್ಕು ವರ್ಷಗಳಲ್ಲಿ ಹಣ್ಣಿನ ಸಸಿಗಳನ್ನು ನೀಡುವ ಕಾರ್ಯದಲ್ಲಿ ತೊಡಗಿರುವ, ದೇವಳದ ಕೆಲಸ ಕಾರ್ಯಗಳಲ್ಲಿ ಪೂರಕವಾಗಿ ಸಹಕರಿಸುತ್ತಿರುವ ಫಲ್ಗುಣಿ ಯುವಕಮಂಡಲವನ್ನು ಅಭಿನಂದಿಸಿದರು.

ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ಧನಂಜಯ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ದೂರದೂರಿನ ರಾಸಾಯನಿಕ ಬೆರೆತ ಹಣ್ಣುಹಂಪಲು, ತರಕಾರಿ ಸೇವಿಸಿ ದೇಹದ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ನಾವು ಜೀವಿಸುವ ಪರಿಸರದ್ದೇ ಆದ ಹಣ್ಣುಹಂಪಲು, ತರಕಾರಿ, ದವಸಧಾನ್ಯಗಳನ್ನು ಸೇವಿಸುವ ಜಾಣ್ಮೆ ತೋರಬೇಕಾಗಿದೆ ಎಂದು ಅವರು ಹೇಳಿದರು.ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.  25 ಮಂದಿಗೆ ಕಸಿಕಟ್ಟಿದ ಮಾವಿನ ಸಸಿಗಳನ್ನು ವಿತರಿಸಲಾಯಿತು. ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮನೋಹರ ನಾಯ್ಕ್ ಫಲಾನುಭವಿಗಳ ಪಟ್ಟಿ ವಾಚಿಸಿದರು.ಪ್ರಸಾದ್ ಶೆಟ್ಟಿ ನಿರೂಪಿಸಿದರು. ಶುಭಕರ ಸಾಲ್ಯಾನ್ ವಂದಿಸಿದರು.

By Suddi9

Leave a Reply

Your email address will not be published. Required fields are marked *