ಕೈಕಂಬ/ಸುರತ್ಕಲ್: ವಿದ್ಯುತ್ ತಂತಿಯ ಕಾರ್ಯ ನಿರ್ವಹಿಸುತ್ತಿದ್ದ ವೇಳೆ  ಟಿವಿ ಕೇಬಲ್ ಮೂಲಕ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಗುತ್ತಿಗೆದಾರ  ಹಾವೇರಿ ಮೂಲದ ಜಾಫರ್ (30)  ಎಂಬವರು ಮೃತಪಟ್ಟ ಘಟನೆ ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿ ಗುರುವಾರ ಸಂಜೆ ನಡೆದಿದೆ.
ಜಾಫರ್ ಮಂಗಳೂರಿನ ಜೋಗಿನ್ ಎಲೆಕ್ಟ್ರಿಕಲ್ಸ್‌ನ ಗುತ್ತಿಗೆ ಕಾರ್ಮಿಕರಾಗಿದ್ದು, ಇತರ 10 ಮಂದಿ ಜತೆಯಲ್ಲಿ ಗುರುವಾರ ಕೃಷ್ಣಾಪುರ 6ನೇ ಬ್ಲಾಕ್‌ನ ಮುನೀರ್ ಹಾರ್ಡ್‌ವೇರ್ ಆಮಂತ್ರಣ ಹೋಟೆಲ್ ಬಳಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ತೊಂದರೆಯಾಗುತ್ತಿದೆ ಎಂದು ಕಂಬದ ಮೂಲಕ ಹಾದು ಹೋಗಿದ್ದ ಟಿವಿ ಕೇಬಲ್‌ನ್ನು ಕೆಳಕ್ಕೆ ಹಾಕಿದ್ದರು.

ಕೆಲಸ ಪೂರ್ಣವಾಗುವ ಮೊದಲೇ ಸಾಯಿ ಸೆಟಲೈಟ್‌ನ ರಾಜು ಎಂಬವರು ಟಿವಿ ಕೇಬಲ್‌ನ್ನು ಪುನ ಕಂಬಕ್ಕೆ ಕಟ್ಟಲು ಎಳೆದಾಗ ಅದು ಚೇಳಾರು ಫೀಡರ್‌ಗೆ ಹಾದು ಹೋಗುವ ಹೈ ಟೆನ್ಶನ್ ವಿದ್ಯುತ್ ವಯರ್‌ಗೆ ತಾಗಿತ್ತು. ಕೇಬಲ್‌ಗೆ ಸಪೋರ್ಟ್ ಆಗಿ ಕಟ್ಟಿದ್ದ ತಂತಿ ಮೂಲಕ ವಿದ್ಯುತ್ ಪ್ರವಹಿಸಿತ್ತು. ಇದು ಸುಮಾರು 13 ಅಡಿ ಎತ್ತರದಲ್ಲಿ ಕೆಲಸ ಮಾಡುತ್ತಿದ್ದ ಜಾಫರ್‌ಗೆ ತಗುಲಿ ಅವರು ಕಂಬದಿಂದ ಕೆಳಗೆ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ. ಸಾಯಿ ಕೇಬಲ್‌ನ ರಾಜು ಅವರ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *