ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ, ಪ್ರಸೂತಿಹಾಗೂ ಸ್ತ್ರೀರೋಗ ವಿಭಾಗ, ಯೆನೆಪೋಯ ನರ್ಸಿಂಗ್ ಕಾಲೇಜು, ವೈದ್ಯಕೀಯ ಸಮಾಜ ಕಾರ್ಯ ವಿಭಾಗ ಹಾಗೂ ಆಸ್ಪತ್ರೆ ಆಡಳಿತ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಿದ ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ಘಾಟನೆಯು 2016 ಆಗಸ್ಟ್ ಒಂದರಂದು ಅಸ್ಪತ್ರೆಯಲ್ಲಿ ಜರಗಿತು. ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮೊಹಮ್ಮದ್ ಅಮೀನ್ ವಾಣಿಯವರು ಉದ್ಘಾಟನೆಯನ್ನು ನೆರವೇರಿಸಿ ಶಿಶುಮರಣ ಹಾಗೂ ರೋಗಗಳನ್ನು ನಿವಾರಿಸುವಲ್ಲಿ ಸ್ತನ್ಯಪಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಿ, ಎಲ್ಲಾ ತಾಯಂದಿರು ಸ್ತನ್ಯಪಾನದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ರಾಯಭಾರಿಗಳಂತೆ ಶ್ರಮಿಸಬೇಕೆಂದು ಕರೆನೀಡಿದರು.
ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾ ಶೆಟ್ಟಿಯವರು 2016 ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ದೇಶ ಹಾಗೂ ಈ ವರ್ಷದ ಮುಖ್ಯ ಸಂದೇಶದ ಬಗ್ಗೆ ವಿವರಿಸಿದರು. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸ್ವಚ್ಛತೆ, ಪೌಷ್ಶಿಕತೆ, ರೋಗ ಪ್ರತಿಬಂಧಕ ಚುಚ್ಚುಮದ್ದು, ಎದೆಹಾಲುಡಿಸುವಿಕೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಯೆನೆಪೋಯ ಮೆಡಿಕಲ್ ಕಾಲೇಜಿನÀ ಸಮುದಾಯ ವೈದ್ಯಕೀಯ ವಿಭಾಗವು ಮಕ್ಕಳ ವಿಭಾಗ ಹಾಗೂ ಹೆರಿಗೆ ವಿಭಾಗದ ಸಹಭಾಗಿತ್ವದಲ್ಲಿ ರೂಪಿಸಲಾದ ‘ಮದರ್ ಕ್ರಾಪ್ಟ್’ ಸೇವೆಯನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಭಯ ನಿರ್ಗುಡೆ ಈ ಸೇವೆಯ ಬಗ್ಗೆ ವಿವರಗಳನ್ನು ನೀಡಿದರು.
ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ್ ಸಲ್ದಾನ , ದಾದಿಯರ ಅಧೀಕ್ಷಕಿ ಶ್ರೀಮತಿ ಭಾನುಮತಿ ಹಾಗೂ ವೈದ್ಯಕೀಯ ಸಮಾಜ ಕಾರ್ಯ ವಿಭಾಗ ದ ಸಹಾಯಕ ಪ್ರಾಧ್ಯಾಪಕಿ ಡಾ.ಮಾಧವಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೈದ್ಯಕೀಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಮಹಮ್ಮದ್ ಗುತ್ತಿಗಾರ್ ಸ್ವಾಗತಿಸಿದ್ದು ಮಕ್ಕಳ ಚಿಕಿತ್ಸಾ ವಿಭಾಗದ ಪ್ರೊಫೆಸರ್ ಡಾ.ಅನಿತಾ ಪ್ರಭು ವಂದಿಸಿದರು.
ವೈದ್ಯಕೀಯ ಸಮಾಜಕಾರ್ಯ ವಿಭಾಗದ ಶ್ರೀ ಅಬ್ದುಲ್ ರಜಾಕ್ ಹಾಗೂ ಶ್ರೀ ನುಮಾನ್ ಕಾರ್ಯಕ್ರಮ ಸಂಯೋಜಿಸುವಲ್ಲಿ ಸಹಕರಿಸಿದ್ದರು.
ಈ ಸಪ್ತಾಹದ ಅಂಗವಾಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾಹಿತಿ, ಸಿಬ್ಬಂದಿ ವರ್ಗದವರಿಗೆ ಜಾಗೃತಿ ಹಾಗೂ ಗ್ರಾಮೀಣ ವಿಸ್ತರಣಾ ಕೇಂದ್ರಗಳಲ್ಲಿ ಮಹಿಳೆಯರಿಗೆ ಭಿತ್ತಿಚಿತ್ರ, ಕರಪತ್ರ, ರೂಪಕ ಹಾಗೂ ಉಪನ್ಯಾಸ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


