ಮೂಡುಬಿದಿರೆ: ಅಳಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಶಿಕ್ಷಕರನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ಹಾಗೂ ಶಾಲಾ ಕೊಠಡಿ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಶಾಲೆಯ ಆವರಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ರಜೆ ಹಾಕಿದ್ದು, ಅವರ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಯಲ್ಲಿ ಬಂದು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶವನ್ನು ವ್ತಕ್ತಪಡಿಸಿದರು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸುಕುಮಾರ್ ಜೈನ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಶಾಲಾ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆಯಿಲ್ಲ ಎಂದು ಆರೋಪಿಸಿದರು.
1mood 1
ವಾರ್ಡ್ ಸದಸ್ಯ ಗಣೇಶ್ ಅಳಿಯೂರ್ ಮಾತನಾಡಿ, ಮೂಡುಬಿದಿರೆ ಶಾಸಕರು, ಜಿ.ಪಂ, ತಾ.ಪಂ ಸದಸ್ಯರು ಸಹಿತ ಜನಪ್ರತಿನಿಧಿಗಳು, ಪಿಡಿಒ ಸ್ಥಳಕ್ಕೆ ಆಗಮಿಸಿ ಶಾಲೆಯ ಸಮಸ್ಯೆಯನ್ನು ಅರಿತು, ಸ್ಪಂದಿಸಬೇಕು. ಸರ್ಕಾರಿ ಶಾಲೆ ಉಳಿಯಬೇಕು ಎನ್ನುವ ನೈಜ್ಯ ಕಾಳಜಿ ಶಿಕ್ಷಣಾಧಿಕಾರಿಯವರಲ್ಲಿದರೆ ತಕ್ಷಣ ಶಾಲೆಗೆ ಬರಬೇಕು. ಅವರು ಸ್ಥಳಕ್ಕೆ ಬರುವ ತನಕ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ. ಸ್ಪಂದನೆ ಸಿಗದಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ತೀರ್ಮಾನಕ್ಕೆ ಬಂದಿದ್ದಾರೆ. ಶಿಕ್ಷಣಾಧಿಕಾರಿ, ನಮ್ಮ ಶಾಲೆಗೆ ಬಂದಿರುವ ಇಂಗ್ಲೀಷ್ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೇ ಖಾಸಗಿ ಸಂಸ್ಥೆಯವರಿಂದ ಲಂಚವನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.

ಸಭೆ ನಡೆಸಿದರೂ ಬಿಇಒ ಬರಲ್ಲ. ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು, ಅದಕ್ಕೂ ಉತ್ತರವಿಲ್ಲ. 7 ತಿಂಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಹಳೆ ಕಟ್ಟಡವನ್ನು ಕೆಡವಿದ್ದು, ಹೊಸ ಕಟ್ಟಡ ಶೀಘ್ರದಲ್ಲೇ ಮಾಡಿಕೊಡುತ್ತೇವೆ ಎಂದು ಹೇಳಿದರು ಯಾವುದೇ ಕ್ರಮ ಶಿಕ್ಷಣ ಇಲಾಖೆಯಿಂದ ಆಗಿಲ್ಲ. ಮಳೆಗೆ ಒದ್ದೆಯಾಗಿ ಪಾಠ ಕೇಳುವ ದುಸ್ಥಿತಿ ಇಲ್ಲಿನ ಮಕ್ಕಳದ್ದು. ಸರ್ಕಾರಿ ಶಾಲೆ ಉಳಿಸಿ ಎಂದು ಸರ್ಕಾರ ಹೇಳಿದ್ದರೂ, ಇಲ್ಲಿನ ಶಿಕ್ಷಣಾಧಿಕಾರಿಗಳಿಗೆ ಅದು ಯಾಕೆ ಅನ್ವಯವಾಗಲ್ಲ? ಎಂದು ಗ್ರಾಮಸ್ಥ ಜಿನಚಂದ್ರ ಪ್ರಶ್ನಿಸಿದರು. ಪ್ರತಿಭಟನೆಗೆ ಮೊದಲು ಶಿಕ್ಷಣಾಧಿಕಾರಿಯನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ, `ನನಗೆ ದೇವಸ್ಥಾನದಲ್ಲಿ ಕೆಲಸವಿದೆ, ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬ ಈ ರೀತಿ ಸ್ಪಂದಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥೆ ಪ್ರಮೀಳ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟದ ಪ್ರಮುಖರಾದ ಸುಧಾಕರ ಡಿ.ಪೂಜಾರಿ ಸಹಿತ ಸ್ಥಳೀಯರು, ಸಂಘ ಸಂಸ್ಥೆಯ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *