ಬಂಟ್ವಾಳ: ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೆತ್ತಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಸರ್ವೀಸ್ ರಸ್ತೆಯಲ್ಲಿ ಬಸುಗಳು ನಿಗುಗಡೆಯ ಜಾಗದಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆ ಕಿರಿ ಕಿರಿ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸಮಸ್ಯೆ ನಿವಾರೆಣೆಗಾಗಿ ಅಗಲೀಕರಣಗೊಳಿಸಿ ಡಾಮರೀಕರಣ ಮಾಡುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷನ್ ಜಿ. ಬೊರಸೆ ಸ್ಥಳೀಯ ಆಡಳಿತದೊಂದಿಗೆ ಮಾತುಕತೆ ನಡೆಸಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರು.
ಕಳೆದ ಒಂದು ವಾರದಿಂದ ಕುಂಟುತ್ತ ಸಾಗುತ್ತಿರುವ ಕಾಮಗಾರಿ ಸಾರ್ವಜನಿಕರಿಗೆ ಇನ್ನಷ್ಟು ಸಮಸ್ಯೆಯನ್ನು ಉಂಟುಮಾಡಿದೆ. ಅಗಲೀಕರಣ ಮಾಡುವ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ ಅಂಗಡಿಗಳ ಒಳಗೆ ಮಲೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ಮತ್ತು ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ನಿಲ್ಲಲು ಸ್ಥಳವಿಲ್ಲದಂತಾಗಿದೆ. ಅಂಗಡಿಗಳಿಗೆ ನೀರು ನುಗ್ಗಿರುವ ಪರಿಣಾಮ ಅಂಗಡಿಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೀಡಾಗಿವೆ. ಹೆದ್ದಾರಿ ಇಲಾಖೆ ಮಾಡಬೇಕಾದ ಕಾಮಗಾರಿ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ. ಅವೈಜ್ಞಾನಿಕ ಮತ್ತು ಅವ್ಯವಸ್ಥೆಯ ಕಾಮಗಾರಿಯಿಂದಾಗಿ ಬಿ.ಸಿ.ರೋಡಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿವೆ. ಕಳೆದ ವಾರ ಪೊಲೀಸ್ ಇಲಾಖೆ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನೂ ಅರ್ಧದಲ್ಲೇ ನಿಲ್ಲಿಸಿದರೆ ಸಾರ್ವಜನಿಕರು ಇನ್ನಷ್ಟು ಸಮಸ್ಯೆ ಎದುರಿಸಬೇಕಾಗಿದೆ.


