ಮೂಡುಬಿದಿರೆ: ನಮ್ಮ ದೇಶದ ಸೈನಿಕರು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಅಸಹನೀಯ ಕಿರುಕುಳದ ನಡುವೆಯೂ ರಾಷ್ಟ್ರದ ಏಕತೆ ಮತ್ತು ಭದ್ರತೆಗಾಗಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಸೈನಿಕರ ಹೊರತಾಗಿ ಯಾವ ಸರಕಾರಗಳೂ ಕಾಶ್ಮೀರವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದೆ. ಆದರೆ ರಾಜ್ಯದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರು ಸೈನಿಕರು ಹಣ ಸಂಪಾದನೆಗಾಗಿ ಸೈನ್ಯವನ್ನು ಸೇರುತ್ತಾರೆ ಎನ್ನುವ ಮೂಲಕ ಸೈನಿಕರ ಬಗ್ಗೆ ಕೀಳಾಗಿ ಮಾತನಾಡಿರುವುದು ತಲೆಕೆಟ್ಟು ಮಾತನಾಡಿದಂತಿದೆ ಎಂದು ವಿಹಿಂಪ ವಿಭಾಗ ಸಹಕಾರ್ಯವಾಹ ಪ್ರಕಾಶ್ ಮಲ್ಪೆ ಹೇಳಿದರು. 
ಅವರು ಸಮಾಜಮಂದಿರದಲ್ಲಿ ಸಂಚಲನ್ ವತಿಯಿಂದ ನಡೆದ ವಿಜಯ ದಿವಸ್ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಬುದ್ಧಿ ಜೀವಿಗಳು ಕಸಬ್,ಅಫ್ಜಲ್ ಗುರು, ಯಾಕೂಬ್ ಗಲ್ಲಿಗೇರಿಸಲ್ಪಟ್ಟಾಗ ಸೂತಕ ಅನುಭವಿಸಿದರು. ಕನಯ್ಯ ಅವರ ಪರವಾಗಿ ಮಾತನಾಡುವ ನಾಲಿಗೆಗಳೂ ನೇಣಿಗೇರಲು ಅರ್ಹತೆ ಹೊಂದಿವೆ . ಇಂದು ದೇಶ ಪರಮವೈಭವದ ಸ್ಥಿತಿಯತ್ತ ಮೆಟ್ಟಿಲೇರುವಂತೆ ಗೋಚರವಾಗುತ್ತಿದೆ ಎಂದ ಪ್ರಕಾಶ್ ತಮ್ಮ ಜೀವ, ಜೀವನ ರಾಷ್ಟ್ರಕ್ಕೆ ಸಮರ್ಪಿಸಿಕೊಂಡಿರುವ ನಮ್ಮ ಸೈನಿಕರಲ್ಲಿ ಅಂದಿನ ಕಾರ್ಗಿಲ್ ಗೆಲುವು ದೇಶಭಕ್ತಿ ಉಕ್ಕಿಸಿದ ಮತ್ತು ಆತ್ಮವಿಶ್ವಾಸ ಹೆಚ್ಚಿಸಿದೆ. ನಾವೆಂದಿಗೂ ಈ ರಾಷ್ಟ್ರ ಮತ್ತು ಸೈನಿಕರನ್ನು ಅವಮಾನಿಸುವವರನ್ನು ಸಹಿಸುವುದಿಲ್ಲ ಎನ್ನುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಯುವ ನ್ಯಾಯವಾದಿ ಸುವೃತ್ ಕುಮಾರ್ ಮಾತನಾಡಿ ಪಾಕಿಸ್ಥಾನದೊಂದಿಗೆ ಹಿಂದಿನ ಯುದ್ಧಗಳನ್ನು ಗೆದ್ದಾಗಲೆಲ್ಲ ರಾಜಕಾರಣಿಗಳು ಒಪ್ಪಂದದಿಂದ ಸೈನಿಕರ ಸಾಹಸವನ್ನು ಕೈಚೆಲ್ಲುವಂತಾಗುತ್ತಿತ್ತು. ಆದರೆ ಕಾರ್ಗಿಲ್ ಗೆಲುವಿನ ನಂತರ ಅಂದಿನ ಪ್ರಧಾನಿ ವಾಜಪೇಯಿ ಇದಕ್ಕೆ ಅವಕಾಶ ನೀಡಲಿಲ್ಲ ಎಂದರು.
ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿಕುಮಾರ್ ಸ್ವಾಮಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಚಲನ್ನ ಸಂಚಾಲಕ ಸೂರಜ್ ಕುಮಾರ್ ಜೈನ್ ಸ್ವಾಗತಿಸಿದರು. ರೋಹನ್ ಕರಿಂಜೆ ವಂದಿಸಿದರು.
ಸಮಾರಂಭದಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ, ಅತಿಥಿಗಳಿಂದ ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ಜಗನ್ನಾಥ್ ಕೊಣಾಜೆ ಕಾರ್ಯಕ್ರಮ ನಿರ್ವಹಿಸಿದರು.
