ಬಂಟ್ವಾಳ:ತಾಲ್ಲೂಕಿನ ಮೊಗರ್ನಾಡು ಸಾವಿರ ಸೀಮೆ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ವಕೀಲ ಅಶೋಕ್ ಕುಮಾರ್ ಬರಿಮಾರು ಇವರು ಆಯ್ಕೆಯಾಗಿದ್ದಾರೆ.
ಕ್ಷೇತ್ರದ ಆಡಳಿತಾಧಿಕಾರಿ ಉಮೇಶ್ ಭಟ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿರುವ ಇವರು ರೂ 10 ಕೋಟಿ ವೆಚ್ಚದಲ್ಲಿ ದೇವಳದ ಜೀರ್ಣೋದ್ಧಾರ ಕಾಮಗಾರಿ ನಡೆಸುತ್ತಿದ್ದಾರೆ. ಕಳೆದ ವರ್ಷ ಕ್ಷೇತ್ರದಲ್ಲಿ ಮಹಾಚಂಡಿಕಾ ಯಾಗ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವನ್ನು ಯಶಸ್ವಿ ನಿರ್ವಹಿಸಿದ್ದಾರೆ ಎಂದು ಆಡಳಿತಾಧಿಕಾರಿ ತಿಳಿಸಿದರು.
ಸಮಿತಿ ಸದಸ್ಯರಾದ ಕೆ. ಪದ್ಮನಾಭ ರೈ, ವಸಂತ ದೇವಾಡಿಗ, ಬಾಳಪ್ಪ ಗೌಡ, ಬಟ್ಯಪ್ಪ ಶೆಟ್ಟಿ, ಗಣೇಶ್ ನಾಯಕ್, ಚೇತನಾ ಜೆ. ಪೂಜಾರಿ, ಹೇಮಲತಾ ವಿ. ಗಟ್ಟಿ, ಪ್ರಧಾನ ಅರ್ಚಕ ನಾರಾಯಣ ಕಾರಂತ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಉಪಸ್ಥಿತರಿದ್ದರು.

