
ಬಂಟ್ವಾಳ: ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುತ್ತಿರುವ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬಳ ಉತ್ತರಪತ್ರಿಕೆಯಲ್ಲಿ 12 ಪುಟಗಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಗೋವಿಂದಬೆಟ್ಟು ನಿವಾಸಿ ಜಿ.ದಾಮೋದರ ಬಂಗೇರ-ಶಶಿಕಲಾ ಡಿ.ಬಂಗೇರ ದಂಪತಿ ಪುತ್ರಿಯಾಗಿರುವ ವಿದ್ಯಾರ್ಥಿನಿ ರಜಿತಾ ಎಂಬಾಕೆಗೆ ದ್ವಿತೀಯಭಾಷೆ (ಇಂಗ್ಲೀಷ್) ಪತ್ರಿಕೆಯಲ್ಲಿ 100ರಲ್ಲಿ ಕೇವಲ 37 ಅಂಕಗಳು ದೊರೆತಿತ್ತು.
ಇದರಿಂದಾಗಿ ಉನ್ನತಶ್ರೇಣಿಯಲ್ಲಿ ತೇರ್ಗಡೆಯಾಗಬೇಕಿದ್ದ ವಿದ್ಯಾರ್ಥಿನಿಗೆ ಒಟ್ಟು 625ರಲ್ಲಿ 431ಅಂಕಗಳು ದೊರೆತಿತ್ತು. ಈ ಹಿಂದೆ ಈಕೆಯ ಹಿರಿಯ ಸಹೋದರಿ ರಶ್ಮಿತಾಳಿಗೂ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ 13 ಹೆಚ್ಚುವರಿ ಅಂಕ ದೊರೆತಿತ್ತು.
ಇದರಿಂದಾಗಿ ಈಕೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮೊದಲು ಉತ್ತರ ಪತ್ರಿಕೆ ಪ್ರತಿಯನ್ನು ಬುಧವಾರ ತರಿಸಿಕೊಂಡಾಗ ಈ ಅವಾಂತರ ಗಮನಕ್ಕೆ ಬಂದಿದೆ. ಈಕೆ ಬರೆದ ಒಟ್ಟು 20ಪುಟಗಳ ಪೈಕಿ ಕೇವಲ 8 ಪುಟಗಳು ಮಾತ್ರ ದೊರೆತಿದ್ದು, ಉಳಿದಂತೆ ನಡುವೆ ಬೇರೆ ವಿದ್ಯಾರ್ಥಿಗೆ ಸೇರಿದ 12 ಪುಟಗಳು ಸೇರ್ಪಡೆಗೊಂಡಿರುವುದು ಪತ್ತೆಯಾಗಿದೆ. ಈ 12ಪುಟಗಳ ಅಂಕ ಒಟ್ಟುಗೂಡಿಸಿದರೆ ಈಕೆಗೆ ಒಟ್ಟು 85 ಅಂಕ ದೊರೆಯುತ್ತಿದ್ದು, ಅದನ್ನು ಸೇರ್ಪಡೆಗೊಳಿಸದೆ ಈಕೆ ಬರೆದಿದ್ದ 12ಪುಟಗಳು ನಾಪತ್ತೆಯಾಗಿರುವ ಪರಿಣಾಮ ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತಾಗಿದೆ. ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ತಪ್ಪು ಉಂಟಾದಲ್ಲಿ ಶಿಕ್ಷಕರಿಗೆ ರೂ 1,500 ದಂಡ ವಿಧಿಸುವ ಪರೀಕ್ಷಾ ಮಂಡಳಿ ಇಂತಹ ಅವಾಂತರಕ್ಕೆ ಯಾರಿಗೆ ದಂಡ ವಿಧಿಸುತ್ತದೆ ಎಂಬ ಪ್ರಶ್ನೆ ಶಿಕ್ಷಕರನ್ನು ಕಾಡತೊಡಗಿದೆ.
