ಬಂಟ್ವಾಳ : ವಿಜಯ ಬ್ಯಾಂಕ್ ಸಿದ್ದಕಟ್ಟೆ ಶಾಖೆಯಲ್ಲಿ ಪ್ರಬಂಧಕರಾಗಿ ಕಾರ್ಯ ನಿರ್ವಹಿಸಿ ಬಂಟ್ವಾಳ ಜಕ್ರಿಬೆಟ್ಟು ಶಾಖೆಗೆ ವರ್ಗಾವಣೆಗೊಂಡ ಬೇಬಿಕುಂದರ್ ಅವರಿಗೆ ಸಿದ್ದಕಟ್ಟೆ ಜನತೆಯ ವತಿಯಿಂದ ಸಾರ್ವಜನಿಕ ಬೀಳ್ಕೊಡುಗೆ ಮತ್ತು ಸಮ್ಮಾನ ಕಾರ್ಯಕ್ರಮ ಸಿದ್ದಕಟ್ಟೆ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಮೇ 20ರಂದು ಸಂಜೆ ಜರಗಿತು.
ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಗೋಪಿನಾಥ್ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಾರ್ವಜನಿಕ ಸಂಸ್ಥೆಯಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದಾಗ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ.ಅಂತಹ ಉತ್ತಮ ಕಾರ್ಯ ಬೇಬಿಕುಂದರ್ ಅವರಿಗೆ ಸಾಧ್ಯವಾಗಿದೆ.ಅದರಿಂದ ಜನಪ್ರೀತಿ ಗಳಿಸಿದ್ದಾರೆ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಸಿದ್ದಕಟ್ಟೆ ವೈದ್ಯ ಡಾ|ಪ್ರಭಾಚಂದ್ರ ಅವರು ಮಾತನಾಡಿ ವೃತ್ತಿ ಬದುಕಿನ ಪ್ರಾಮಾಣಿಕತೆ,ನಿಷ್ಟೆ ,ಜನರೊಂದಿಗಿನ ವಿಶ್ವಾಸ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂಬುವುದಕ್ಕೆ ಬೇಬಿಕುಂದರ್ ಅವರ ಕರ್ತವ್ಯಪರತೆಯೇ ಸಾಕ್ಷಿಯಾಗಿದೆ ಎಂದರು.ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಐತಪ್ಪ ಅಳ್ವ ಅವರು ಮಾತನಾಡಿ ಬೇಬಿ ಕುಂದರ್ ಅವರ ಕರ್ತವ್ಯದಲ್ಲಿ ಪಾರದರ್ಶಕತೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಸಿದ್ದಕಟ್ಟೆಯ ಜನತೆ ಅಭಾರಿಯಾಗಿದ್ದಾರೆ ಎಂದು ಹೇಳಿದರು.ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ರಾಮಣ್ಣ ರೈ ಮಾವಂತೂರು ಅವರು ಮಾತನಾಡಿ ಸ್ಥಳೀಯವಾಗಿ ಸಲ್ಲಿಸಿದ ಉತ್ತಮ ಸೇವೆಯಿಂದ ಬ್ಯಾಂಕ್ ಅಧಿಕಾರಿಯನ್ನು ಗುರುತಿಸುವಂತಾಗಿದೆ.ಅವರ ಸೇವೆಯಿಂದ ಸಾರ್ವಜನಿಕರಿಗೆ ಮಹತ್ತರ ಪ್ರಯೋಜನ ದೊರಕಿದೆ ಎಂದರು.
ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾಸಂಘದ ಅಧ್ಯಕ್ಷ ಗೋಪಾಲ ಬಂಗೇರ ಮತ್ತು ಉದ್ಯಮಿ ನಿತ್ಯಾನಂದ ಕೆಂತಲೆ ಅವರು ಸಾರ್ವಜನಿಕರ ಪರವಾಗಿ ಅನಿಸಿಕೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.
ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಬೇಬಿ ಕುಂದರ್ ಅವರು ಮಾತನಾಡಿ ವಿಜಯಾ ಬ್ಯಾಂಕ್ ಕೊಟ್ಟ ಉದ್ಯೋಗದ ಋಣವನ್ನು ತೀರಿಸುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ತೃಪ್ತಿಯಿದೆ.ಗ್ರಾಹಕರಿಗೆ ಸರಿಯಾದ ಮಾಹಿತಿ ಮತ್ತು ಸೇವೆ ಒದಗಿಸುವುದು ಕರ್ತವ್ಯ.ಗ್ರಾಮೀಣ ಪ್ರದೇಶದ ಜನರ ಅರ್ಥಿಕ ಬಂಡವಾಳವನ್ನು ಸದುಪಯೋಗ ಪಡಿಸಿಕೊಳ್ಳಲಾಗಿದ್ದು ಕಳೆದ ಆರ್ಥಿಕ ವರ್ಷದಲ್ಲಿ 15 ಕೋಟಿ ರೂ.ವ್ಯವಹಾರ ನಡೆಸುವ ಮೂಲಕ ಮತ್ತು ಪ್ರಧಾನ ಮಂತ್ರಿ ಜನಧನ್ ಯೋಜನೆ,ಸುರಕ್ಷಾ ವಿಮಾ ಯೋಜನೆ ಮೊದಲಾದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನ ಗೊಳಿಸಿ ಮೂಲಕ ಮಂಗಳೂರು ವಲಯದ 80 ಶಾಖೆಗಳಲ್ಲಿ ಸಿದ್ದಕಟ್ಟೆ ಶಾಖೆ ಅಗ್ರಸ್ಥಾನ ಪಡೆದಿದೆ ಎಂದ ಅವರು ಪರಿಸರದ 40 ಇಂಜಿನೀಯರಿಂಗ್ ಮತ್ತು 8 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲಾಗಿದೆ .ಗ್ರಾಹಕರ ಮತ್ತು ಸಿಬಂದಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ .ವೃತ್ತಿ ಜೀವನಕ್ಕೆ ಸಿದ್ದಕಟ್ಟೆ ಊರು ಶಕ್ತಿ ನೀಡಿದೆ ಎಂದು ಹೇಳಿದರು.
ಗ್ರಾ.ಪಂ.ಉಪಾಧ್ಯಕ್ಷ ಸತೀಶ್ ಪೂಜಾರಿ,ಅಶ್ವಿನಿ ಕಾಂಪ್ಲೆಕ್ಸ್ ಮಾಲಕ ಸಂದೀಪ್ ಶೆಟ್ಟಿ ವೇದಿಕೆಯಲ್ಲಿದ್ದರು. ಡಾ|ಕೃಷ್ಣಮೂರ್ತಿ ,ಉದ್ಯಮಿ ರೊನಾಲ್ಡ್ ಮೋರಾಸ್,ಗ್ರಾ.ಪಂ.ಸದಸ್ಯರಾದ ದೇವಪ್ಪ ಕರ್ಕೇರಾ,ಮಯ್ಯದ್ದಿ,ಪ್ರಮುಖರಾದ ಗಣೇಶ್ ನಾಯಕ್,ಮಂದಾರತಿ ಎಸ್ .ಶೆಟ್ಟಿ,ಅರುಣಾ ಪೂಜಾರಿ,ಅರುಣಾ ಶೆಟ್ಟಿ,ಭೋಜ ಶೆಟ್ಟಿ,ಕಿರಣ್ ಬೆಂಗಳೂರು,ವಿಜಯರಾಜ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
