ಬಂಟ್ವಾಳ ಪುರಸಭಾ ವ್ಯಾಪ್ತಿಯ ಬೋಳಂಗಡಿ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಸ್ಥಳೀಯರು ಮಂಗಳವಾರ ಧಾವಿಸಿ ಪುರಸಭೆಗೆ ಮುತ್ತಿಗೆ ಹಾಕಿದರು.
ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ಬೋಳಂಗಡಿ ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯಲು ನೀರಿಲ್ಲದೆ ಜನರು ಪರದಾಡುತ್ತಿದ್ದರೂ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಾಗರಿಕರು ಮಂಗಳವಾರ ಧಾವಿಸಿ ಪುರಸಭೆ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಇಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಕೊಳವೆ ಬಾವಿ ಕೊರೆಯಲಾಗಿದ್ದರೂ ಅದಕ್ಕೆ ಪೈಪ್ ಮತ್ತು ಪಂಪು ಅಳವಡಿಸುವಲ್ಲಿ ಪುರಸಭೆ ತೀರಾ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಈ ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ತುರ್ತು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪುರಸಭೆಗೆ ಸರ್ಕಾರದಿಂದ ರೂ 23 ಲಕ್ಷ ಮೊತ್ತದ ಅನುದಾನ ಬಂದಿದೆ ಎಂದು ಮುಖ್ಯಾಧಿಕಾರಿ ಸುಧಾಕರ ಭಟ್ ಹೇಳುತ್ತಿದ್ದು, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಅನುದಾನ ಇಲ್ಲ ಎನ್ನುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೇ ವೇಳೆ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮತ್ತು ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಮತ್ತಿತರರು ಪಂಪ್ ಅಳವಡಿಸುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪ್ರಮುಖರಾದ ಮುಹಮ್ಮದ್, ಮುಸ್ತಫಾ ಎಂ.ಎಚ್., ಖಾಸಿಮ್ ಚಂದಾಡಿ, ಹೈದರ್ ಬೋಳಂಗಡಿ, ಬಶೀರ್ ಗೋಡೇಲ್, ಅನ್ಸಾರ್, ದಯಾನಂದ, ಆದಂ, ದೇವದಾಸ, ಹೊನ್ನಮ್ಮ, ಸುಜಾತಾ, ಅವ್ವಮ್ಮ, ಕಲ್ಯಾಣಿ ಮತ್ತಿತರರು ಪಾಲ್ಗೊಂಡಿದ್ದರು.
