‘ತಡೆಗೆ ಸಾರ್ವಜನಿಕ ಸಹಭಾಗಿತ್ವವೊಂದೇ ಪರಿಹಾರ’
* ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ಪ್ರಕರಣ ಪತ್ತೆ
ಬಂಟ್ವಾಳ, ಮೇ 13: ಸುಡು ಬೇಸಿಗೆಯಲ್ಲೇ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಡೆಂಗ್, ಮಲೇರಿಯಾ ಹಾವಲಿ ಲಗ್ಗೆ ಇಟ್ಟಿದ್ದು ಈಗಾಗಲೇ ತಾಲೂಕಿನಾದ್ಯಂತ ಹತ್ತು ಹಲವು ಮಂದಿ ರೋಗಕ್ಕೆ ತುತ್ತಾಗಿದ್ದಾರೆ. ಹೆಚ್ಚಿನ ರೋಗ ಬಾಧಿತರು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನು ಕೆಲವರು ಚಿಕಿತ್ಸೆಯ ಬಳಿಕ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ತಾಲೂಕಿನ ಅಮ್ಟಾಡಿ ಹಾಗೂ ಬಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 22, ಬೆಂಜನ ಪದವಿನಲ್ಲಿ 3, ಕಲ್ಲಡ್ಕ, 2, ಬ್ರಹ್ಮರಕೊಟ್ಲು 4, ಅಗ್ರಹಾರ 2 ಸೇರಿದಂತೆ ಬಂಟ್ವಾಳ ತಾಲೂಕೊಂದರಲ್ಲೇ ಎಪ್ರಿಲ್, ಮೇ ತಿಂಗಳಲ್ಲಿ 50ಕ್ಕೂ ಹೆಚ್ಚು ಮಂದಿಯಲ್ಲಿ ಡೆಂಗ್ ಜ್ವರ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಮಾರಣಾಂತಿಕ ಕಾಯಿಲೆಯಾಗಿರುವ ಡೆಂಗ್ ಹಾಗೂ ಮಲೇರಿಯಾ ಹೆಚ್ಚಾಗಿ ಮಳೆಗಾಲದಲ್ಲಿ ಕಂಡು ಬರುತ್ತದೆಯಾದರೂ ಈ ಬಾರಿ ಸುಡು ಬೇಸಿಗೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವುದು ತಾಲೂಕಿನ ಜನರನ್ನು ಆತಂಕಕ್ಕೀಡು ಮಾಡಿದೆ. ನಗರ ಪ್ರದೇಶಕ್ಕಿಂತಲೂ ಹೆಚ್ಚಾಗಿ ಗ್ರಾಮೀಣ ಭಾಗದಲ್ಲೇ ಹೆಚ್ಚು ಡೆಂಗ್ ಪ್ರಕರಣ ವರದಿಯಾಗಿದ್ದು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸೊಳ್ಳೆ ಉತ್ಪತಿ ತಾಣಗಳ ನಾಶ ಹಾಗೂ ಮುಂಜಾಗೃತ ಕ್ರಮ ತೆಗೆದುಕೊಳ್ಳುವಲ್ಲಿ ಉದಾಸಿನ ತೋರಿದರೆ ಮಳೆಗಾಲದಲ್ಲಂತ್ತೂ ಇವು ಇನ್ನಷ್ಟು ವ್ಯಾಪಿಸಿ ಪ್ರಾಣಾಹಾನಿಗಳೂ ಸಂಭವಿಸುವ ಅಪಾಯವಿದೆ.
ತಾಲೂಕಿನಲ್ಲಿ ಡೆಂಗ್ ಹಾವಲಿ ಹಿನ್ನೆಲೆಯಲ್ಲಿ ತನ್ನನ್ನು ಭೇಟಿಯಾದ ಪತ್ರಕರ್ತರಲ್ಲಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಡೆಂಗ್ ಕಾಣಿಸಿಕೊಂಡ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಸ್ಲಿಂಗರ್ ಮೂಲಕ ತೋಟಕ್ಕೆ ಹಾಯಿಸಿರುವ ನೀರು ಅಡಿಕೆ ಹಾಳೆಗಳು ಹಾಗೂ ತೋಟದ ತೋಡು, ಹೊಂಡಗಳಲ್ಲಿ ನಿಂತಿರುವುದು ಪತ್ತೆಯಾಗಿದೆ. ಈ ನೀರಿನಲ್ಲಿ ಸೊಳ್ಳೆಗಳು ಉತ್ಪಾತಿಯಾಗಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಡೆಂಗ್ ಜ್ವರ ಕಾಣಿಸಿಕೊಳ್ಳಲು ಕಾರಣವಾಗಿದೆ. ಡೆಂಗ್ ಪತ್ತೆಯಾದ ಪ್ರದೇಶಗಳ ಸುತ್ತಮುತ್ತಲ ಹಲವು ಎಕರೆ ತೋಟಗಳಲ್ಲಿ ಬಿದ್ದಿರುವ ಅಡಿಕೆ ಹಾಳೆಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದ್ದು ಸೊಳ್ಳೆಗಳ ನಿರ್ಮೂಲನೆ ಮಾಡುವ ದೃಷ್ಟಿಯಿಂದ ಫಾಗಿಂಗ್ ಕಾರ್ಯಾಚರಣೆ ಕೂಡಾ ಮುಂದುವರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಗರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣದ ಕಾರ್ಯ ನಡೆಯುತ್ತಿರುವ ಒಂದೆರಡು ಕಡೆಯೂ ಡೆಂಗ್ ಪ್ರಕರಣ ಪತ್ತೆಯಾಗಿದೆ. ಕಟ್ಟಡ ನಿರ್ಮಾಣಕ್ಕೆ ನೀರು ನಿಲ್ಲಿಸುವುದರಿಂದ ಅಲ್ಲಿ ಸೊಳ್ಳೆಗಳು ಉತ್ಪತಿಯಾಗುತ್ತಿವೆ. ಇಲ್ಲಿಯೂ ಫಾಗಿಂಗ್ ಕಾರ್ಯಾಚರಣೆ ಮುಂದುವರಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವಷ್ಟು ನೀರು ನಿಲ್ಲಿಸುವಂತೆಯೂ, ಸಾಧ್ಯವಾದಷ್ಟು ನೀರು ಬದಲಾಯಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮನೆ ಪರಿಸರ ಸ್ವಚ್ಛವಾಗಿಡುವುದು ಹಾಗೂ ತೋಟಗಳಲ್ಲಿ ನೀರು ನಿಲ್ಲದೆ ಹಾಗೆ ನೋಡಿಕೊಳ್ಳುವುದೊಂದೇ ಪರಿಹಾರವಾಗಿದೆ. ಫಾಗಿಂಗ್ ಕಾರ್ಯಚರಣೆಯಿಂದ ಸೊಳ್ಳೆಗಳನ್ನು ಕೊಲ್ಲಬಹುದೇ ಹೊರೆತು ಸೊಳ್ಳೆ ಉತ್ಪತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಡೆಂಗ್ ಕಾಣಿಸಿಕೊಂಡ ಪ್ರದೇಶಗಳಲ್ಲಿ ಈಗಾಗಲೇ ಸ್ವಚ್ಛಗೊಳಿಸಿದ ಅಡಿಕೆ ತೋಟದಲ್ಲಿ ಬೀಳುವ ಹಾಳೆಗಳನ್ನು ಆಯಾಯ ದಿವಸವೇ ತೆರವುಗೊಳಿಸುವಂತೆ ಹಾಗೂ ತೋಡು, ಹೊಂಡದಲ್ಲಿ ನೀರು ನೀಲ್ಲದಂತೆ ನೋಡಿಕೊಳ್ಳಲು ಸಲಹೆ ನೀಡಿಲಾಗಿದೆಯಾದರೂ ಅದು ಎಲ್ಲಿಯೂ ಪಾಲನೆಯಾಗುತ್ತಿರುವುದು ಕಂಡು ಬರುತ್ತಿಲ್ಲ. ಸೆಕೆಯಿಂದಾಗಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಕನಿಷ್ಠ ಉಡುಪು ಧರಿಸಿ ಕೆಲಸ ನಿರ್ವಹಿಸುತ್ತಿರುವುದರಿಂದ ಸೊಳ್ಳೆಗಳು ಅವರಿಗೆ ಸುಲಭವಾಗಿ ಕಚ್ಚುತ್ತದೆ. ಕಾರ್ಮಿಕರಿಗೆ ಗರಿಷ್ಠ ಬಟ್ಟೆ ಧರಿಸುವಂತೆಯೂ, ಸೊಳ್ಳೆ ನಿರೋಧಕ ಲೇಪನಗಳನ್ನು ಕೈ, ಕಾಲು, ಮೈಗೆ ಹಚ್ಚುವಂತೆಯೂ ಸಲಹೆ ನೀಡಲಾಗಿದೆ. ಇದನ್ನು ಯಾರೂ ಪಾಲಿಸುತ್ತಿವ ಹಾಗೆ ಕಾಣುತ್ತಿಲ್ಲ. ಆರೋಗ್ಯ ಇಲಾಖೆಯಿಂದ ಮಾತ್ರ ಸಾಂಕ್ರಾಮಿಕ ರೋಗ ನಿರ್ಮೂಲನೆ ಅಸಾಧ್ಯ. ಇಲಾಖೆಯೊಂದಿಗೆ ಸಾರ್ವಜನಿಕರು ಕೂಡ ಸಹಕರಿಸಿದರೆ ಮಾತ್ರ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಡೆಂಗ್ ರೋಗವನ್ನು ಹರಡುವ ಇಡೀಸ್ ಸೊಳ್ಳೆಯುವ ಮನೆ ಒಳಗೆ ಹಾಗೂ ಹೊರ ಭಾಗದಲ್ಲಿರುವ ಶುದ್ಧವಾದ ನೀರಿನಲ್ಲಿ ಮೊಟ್ಟೆ ಇಡುತ್ತದೆ. ಮೊಟ್ಟೆ ಹೊಡೆದು ಹೊರ ಬರುವ ಎಲ್ಲ ಮರಿಗಳು ರೋಗಗ್ರಸ್ಥ ಸೊಳ್ಳೆಗಲೇ ಆಗಿರುತ್ತದೆ. ಒಂದು ಸೊಳ್ಳೆ ಸುಮಾರು 10ರಿಂದ 14 ಮಂದಿಗೆ ಕಚ್ಚುತ್ತದೆ. ಹೀಗಾಗಿ ಈ ರೋಗ ಬೇಗನೆ ಪರಿಸರದಲ್ಲಿ ಪಸರುತ್ತದೆ. ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯಬೇಕಾಗಿದೆ. ರೋಗ ಉಲ್ಬಣಗೊಂಡರೆ ಉನ್ನತ ದರ್ಜೆಯ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ತೋರಿದರೆ ಪ್ರಾಣ ಹಾನಿ ಸಂಭವಿಸುವ ಆಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರೋಗದ ಲಕ್ಷಣಗಳು
ವಿಪರೀತ ತಲೆ ನೋವು, ಚಳಿ ಜ್ವರ, ಮಾಂಸಖಂಡ, ಸ್ನಾಯುಗಳಲ್ಲಿ ನೋವು.
ಚಿಕಿತ್ಸೆ ಹೇಗೆ
ಡೆಂಗ್ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ರೋಗ ತೀವ್ರತೆ ಹೆಚ್ಚಾದಾಗ ಅಥವಾ ರಕ್ತ ಸ್ರಾವದ ಲಕ್ಷಣ ಕಂಡು ಬಂದರೆ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಹೇಗೆ ತಡೆಗಟ್ಟಬಹುದು
ಮನೆ, ಅಂಗಡಿ ಪರಿಸರವನ್ನು ಸ್ವಚ್ಛವಾಗಿಟ್ಟು ಟರಾಸ್ ಹಾಗೂ ತೋಟಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳುವುದು. ಟ್ಯಾಂಕ್, ಸಿಂಟೆಕ್ಸ್, ಡ್ರಮ್, ಬ್ಯಾರಲ್ ಪಾತ್ರೆಗಳಿಗೆ ಭದ್ರವಾಗಿ ಮುಚ್ಚಳ ಅಳವಡಿಸುವುದು. ಇವುಗಳ ನೀರನ್ನು ವಾರೊಕ್ಕೊಮ್ಮೆಯಾದರೂ ಖಾಲಿ ಮಾಡಿ ತಿಕ್ಕಿ ತೊಳೆದು ಸ್ವಚ್ಛಗೊಳಿಸಿ ಒಣಗಿಸಿದ ಬಳಿಕ ಮತ್ತೆ ನೀರು ತುಂಬಿಸುವುದು. ಮನೆಯಲ್ಲಿರುವ ಫ್ರಿಜ್‍ನ ಹಿಂಭಾಗದಲ್ಲಿ ನೀರು ಸಂಗ್ರಹವಾಗುವ ಪಾತ್ರೆಯನ್ನು ವಾರಕ್ಕೊಮ್ಮೆ ಶುಚಿಗೊಳಿಸುವುದು. ಪ್ರತಿ ದಿನ ಉಪಯೋಗಿಸದ ಶೌಚಾಲಯಗಳಿದ್ದಲ್ಲಿ ದಿನದಲ್ಲಿ ಒಂದು ಬಾರಿಯಾದರೂ ನೀರು ಹಾಕುವುದು. ಹೂವಿನ ಗಿಡಗಳನ್ನು ನೆಟ್ಟಿರುವ ಕುಂಡಗಳ ಅಡಿಯಲ್ಲಿ ಜೋಡಿಸಿರುವ ಪ್ಲೇಟುಗಳಿಗೆ, ಮನೆಯ ಹೊರಗೆ ಇರುವ ರುಬ್ಬುವ ಕಲ್ಲು ಹಾಗೂ ಮಳೆ ನೀರು ತುಂಬುವ ವಸ್ತುಗಳಿದ್ದರೆ ಅವುಗಳಲ್ಲಿ ಮರಳು ತುಂಬಿಸುವುದು. ಮನೆ ಪರಿಸರದಲ್ಲಿರುವ ಘನ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು. ಎಳನೀರು ಚಿಪ್ಪುಗಳನ್ನು ನಾಲ್ಕು ತುಂಡುಮಾಡಿ ನೀರು ಬೀಳದ ಸ್ಥಳದಲ್ಲಿಟ್ಟು ಒಣಗಿಸುವುದು. ತೆಂಗಿನಕಾಯಿ ಗೆರಟೆಯನ್ನು ಸುಟ್ಟು ಬಿಡುವುದು. ಹಳೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು, ಬಾಟ್ಲಿ ಇತ್ಯಾದಿಗಳನ್ನು ಒಂದು ಕಡೆ ಜೋಪಾಲವಾಗಿರಿಸಿ ಬಳಿಕ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು. ಟಯರ್‍ಗಳನ್ನು ನೀರು ಬೀಳದ ಜಾಗದಲ್ಲಿ ಶೇಖರಿಸಿಡುವುದು. ತ್ಯಾಜ್ಯ ನೀರು ವಿಲೇವಾರಿಗೆ ಸೂಕ್ತ ವ್ಯವಸ್ಥೆ ಅಳವಡಿಸುವುದು.
ಸ್ವಯಂ ರಕ್ಷಣೆ
ಮನೆಯ ಕಿಟಕಿಗಳಿಗೆ ಸೊಳ್ಳೆ ಪರದೆಯನ್ನು ಅಳವಡಿಸುವುದು. ಸಂಜೆ ಹೊತ್ತಿಗೆ ಕಿಟಕಿ ಬಾಗಿಲುಗಳನ್ನು ಮುಚ್ಚುವುದು. ಧೂಪದ ಹೊಗೆ, ಲಿಕ್ವಿಟರರ್‍ಗಳನ್ನು ಬಳಸಿ ಸೊಳ್ಳೆ ನಿವಾರಿಸಬಹುದು.
ಬಂಟ್ವಾಳ ತಾಲೂಕಿನಲ್ಲಿ 68,949 ಮನೆಗಳಿದ್ದು 4,01,427 ಜನಸಂಖ್ಯೆ ಇದೆ. ಪ್ರತೀಯೊಂದು ಮನೆಗೂ ಭೇಟಿ ನೀಡಿ ಸಾಂಕ್ರಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಇಲಾಖೆಯಿಂದ ಅಸಾಧ್ಯವಾಗಿದೆ. ಆದರೂ ಈಗಾಗಲೇ ಪುರಸಭಾ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಕರಪತ್ರ ಹಚ್ಚಿ ಜಾಗೃತಿ ಮೂಡಿಸಲಾಗಿದೆ. ಸಾಂಕ್ರಾಮಿಕ ರೋಗ ತಡೆಗಟ್ಟುವುದು ಬರೇ ಆರೋಗ್ಯ ಇಲಾಖೆಯಿಂದ ಮಾತ್ರ ಅಸಾಧ್ಯ. ರೋಗ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅತೀ ಮುಖ್ಯವಾಗಿದೆ. ಸಾರ್ವಜನಿಕರು ಮನೆ, ಅಂಗಡಿ ಸೇರಿದಂತೆ ವಾಸ್ತವದ ಪರಿಸರವನ್ನು ಸ್ವಚ್ಛವಾಗಿಡುವುದು, ತೋಟಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳುವುದು ಮಾಡಬೇಕಾಗಿದೆ. ಎಲ್ಲ ಹೊಟೇಲ್‍ಗಳಿಗೆ ಈಗಾಗಲೇ ನೋಟಿಸ್ ನೀಡಿ ಗ್ರಾಹಕರಿಗೆ ಬಿಸಿ ನೀರು ನೀಡುವಂತೆ ಹಾಗೂ ಹೊಟೇಲ್ ಮತ್ತು ಪರಿಸರವನ್ನು ಸ್ವಚ್ಛವಾಗಿಡುವಂತೆ ಸೂಚಿಸಲಾಗಿದೆ. ಸೂಚನೆಗೆ ತಪ್ಪಿದರೆ ಅಂತಹ ಹೊಟೇಲ್ ಮಾಲಕರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು.
– ಡಾ. ದೀಪಾ ಪ್ರಭು, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ

