ಬಂಟ್ವಾಳ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಕಾಮಗಾರಿಗಳನ್ನು ಮಳೆಗಾಲಕ್ಕೆ ಮುನ್ನ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು.
ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಯ್ದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಮಗಾರಿಗೆ ಸ್ಥಳೀಯವಾಗಿ ಇದ್ದ ಕೆಲ ಆಕ್ಷೇಪಗಳನ್ನು ಇತ್ಯರ್ಥಪಡಿಸಲಾಗಿದೆ. ಜೊತೆಗೆ ಕಾಮಗಾರಿ ಸ್ಥಳದಲ್ಲಿ ಗ್ರಾಮಸ್ಥರಿಂದ ಕೇಳಿ ಬಂದ ಬೇಡಿಕೆಗಳಿಗೂ ಸೂಕ್ತ ಸ್ಪಂದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸಲಹೆ ನೀಡಿದ ಅವರು, ಮಳೆಗಾಲಕ್ಕೆ ಮುನ್ನ ಕಾಮಗಾರಿಗಳನ್ನು ಪೂರೈಸುವ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ನಿರ್ವಹಿಸುವಂತೆ ಸಲಹೆ ನೀಡಿದರು.

ದಿನವಿಡೀ ನಡೆದ ಪರಿಶೀಲನೆಯಲ್ಲಿ ಅಮ್ಟಾಡಿ ಗ್ರಾಮದ ನಲ್ಕೆಮಾರ್ ಬಾಂಬಿಲ ರಸ್ತೆ ಕಾಮಾಗಾರಿ, ಬಡಕಬೈಲು- ಕಲಾಯಿ ರಸ್ತೆ ಅಭಿವೃದ್ಧಿ ಕಾಮಗಾರಿ, ಸಾಣೂರು ಪದವು ಕೋಳತ್ತಮಜಲು ರಸ್ತೆ ಅಭಿವೃದ್ದಿ ಕಾಮಗಾರಿ, ಶುಂಠಿಹಿತ್ಲು ಕಲ್ಲೇರಿ ರಸ್ತೆ ಅಭಿವೃದ್ದಿ ಕಾಮಗಾರಿ, ಹಾಗೂ ಮಂಚಿ ಗ್ರಾಮದ ಮೋಂತಿಮಾರು-ಮಂಚಿ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಅಕ್ರಮಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಮಂಗಳೂರು ವೃತ್ತದ ಪಂಚಾಯತ್ ರಾಜ್ ಹಿರಿಯ ಇಂಜಿನಿಯರ್ ರಾಮಕೃಷ್ಣ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಇಂಜಿನಿಯರ್ ಜಯಾನಂದ ಪೂಜಾರಿ, ಗುತ್ತಿಗೆದಾರರಾದ ಕೆ.ಎಂ.ಗಿರೀಶ್ ಕುಮಾರ್, ಸುಧಾಕರ ಶೆಟ್ಟಿ ಇದ್ದರು.
