ಬಂಟ್ವಾಳ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡ ಬಳಿಕ ತಾಲೂಕಿ ಶೇ. 90ರಷ್ಟು ಕೊಳವೆ ಬಾವಿಗಳನ್ನು ಮುಚ್ಚಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈ ಮಾಸಿಕ ಸಭೆಯಲ್ಲಿ ಅವರು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ತಾಲೂಕಿನಾದ್ಯಂತ ವಿವಿಧ ಕುಡಿಯುವ ನೀರಿನ ಯೋಜನೆಯಡಿ 52 ಕೋಟಿ ರುಪಾಯಿಯ ಕಾಮಗಾರಿ ಪ್ರಗತಿಯಲ್ಲಿದೆ ಎಂದ ಸಚಿವರು ಮುಂದಿನ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಎಂದು ತಿಳಿಸಿದರು. ಈ ಸಂದರ್ಭ ಸಂಗಬೆಟ್ಟು ಬಹುಗ್ರಾಮ ಯೋಜನೆಯ ಬಗ್ಗೆ ಎಂಜಿನೀಯರ್ ಗಿರೀಶ್ ಮಾಹಿತಿ ನೀಡಿದರು. ಮುಂದಿನ ಆಗಸ್ಟ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.

ಗಿಡ ನೆಟ್ಟು, ಮರ ಬೆಳೆಸಿ ಪಾಪಮುಕ್ತರಾಗಿ ಎನ್ನುವ ಘೋಷವಾಕ್ಯದಡಿ ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ. ಜೀವ ಜಲ ಕಾಡಿನ ಮಧ್ಯೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಅರಣ್ಯಗಳನ್ನು ಉಳಿಸಿ ಬೆಳೆಸುವ ಪಣವನ್ನು ಎಲ್ಲರು ತೊಡಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಬದುಕೇ ನಾಶವಾಗಲಿದೆ ಎಂದು ಸಚಿವರು ಮನವಿ ಮಾಡಿದರು.
ಸರ್ಕಾರಿ ಆಸ್ಪತ್ರೆಯ ಕಾಮಾಗಾರಿ ಪೂರ್ಣಗೊಳಿಸಿ:
ಬಂಟ್ವಾಳದ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಾಮಾಗಾರಿ ಹಲವು ಸಮಯಗಳಿಂದ ನಡೆಯುತ್ತಿದ್ದು ರೋಗಿಗಳು ತೊಂದರೆ ಪಡುತ್ತಿದ್ದಾರೆ. ಈ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಆಗ್ರಹಿಸಿದರು. ಕಳೆದ ಕೆಲ ದಿನಗಳ ಹಿಂದೆ ಬಿ.ಸಿ.ರೋಡಿಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ಹೇಳಿಕೊಂಡಿರುವ ಬಗ್ಗೆ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಎಂ.ಎಸ್. ಮಹಮ್ಮದ್, ಬಂಗೇರ ಅವರನ್ನು ತರಾಟೆಗೆ ತೆಗದೆಕೊಂಡರು. ಇದೇ ವಿಚಾರವಾಗಿ ಸದಸ್ಯರ ಮಧ್ಯೆ ಕೆಲ ಹೊತ್ತುಗಳ ಕಾಲ ಮಾತಿನ ಚಕಮಕಿಯೂ ನಡೆಯಿತು. ಮುಂದಿನ ಜೂನ್ ತಿಂಗಳ ಒಳಗಾಗಿ ನೂತನ ಕಟ್ಟಡವನ್ನು ಗುತ್ತಿಗೆದಾರ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡುವುದಾಗಿ ತಿಳಿಸಿದಾಗ ಚರ್ಚೆಗೆ ತೆರೆ ಬಿತ್ತು.
ಮೆಸ್ಕಾಂ ಬಿಲ್ ಪರಿಗಣಿಸಿ ಬೇಡಿ:
ಬಿಪಿಎಲ್ ಪಡಿತರ ಚೀಟಿಗೆ ಮಾನದಂಡವಾಗಿ ಮೆಸ್ಕಾಂ ನೀಡುವ ವಿದ್ಯುತ್ ಬಿಲನ್ನು ಪರಿಗಣಿಸಿದಂತೆ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಒತ್ತಾಯಿಸಿದರು. ಇದರಿಂದಾಗಿ ಅದೆಷ್ಟೋ ಅರ್ಹ ಬಡ ಫಲಾನುಭವಿಗಳು ಬಿಪಿಎಲ್ ಪಡಿತರ ಚೀಟಿಯಿಂದಾಗಿ ವಂಚಿತರಾಗುತ್ತಿದ್ದಾರೆ ಎಂದು ಆಗ್ರಹಿಸಿದರು. ಎಲ್ಲಾ ಸದಸ್ಯರು ಪಕ್ಷ ಭೇದ ಮರೆತು ದನಿಗೂಡಿಸಿದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ತುಂಗಪ್ಪ ಬಂಗೇರ, ಎಂ.ಎಸ್.ಮಹಮ್ಮದ್, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ, ಮಂಜುಳ ಮಾಧವ ಮಾವೆ ಹಾಗೂ ಕೆಡಿಪಿ ನಾಮನಿರ್ದೇಶಿತ ಸದಸ್ಯರು ಭಾಗವಹಿಸಿದ್ದರು.
