ಬಂಟ್ವಾಳ: 1980ರಲ್ಲಿ ಆರಂಭಗೊಂಡ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಬಹುವರ್ಷಗಳ ಕನಸಿನ ಯೋಜನೆಯಾದ ಕುಲಾಲ ಸಮುದಾಯ ಭವನ ನಿರ್ಮಾಣಗೊಂಡಿದ್ದು ಎ. 29ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಕಟ್ಟಡ ಸಮಿತಿಯ ಉಪಾದ್ಯಕ್ಷ ಡಿ.ಎಂ.ಕುಲಾಲ್ ತಿಳಿಸಿದರು.
ಸೋಮವಾರ ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ 36 ವರ್ಷಗಳಿಂದ ಕುಲಾಲ ಸುಧಾರಕ ಸಂಘ ಸಮಾಜಮುಖಿ ಚಟುವಟಿಕೆಗಳೊಂದಿಗೆ ನಡೆಸಿಕೊಂಡು ಬಂದಿದ್ದು ಶಾಶ್ವತವಾದ ಆರ್ಥಿಕ ಮೂಲ ಇಲ್ಲದಿದ್ದರೂ ಸಮಾಜದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಿರುವ ಪೊಸಳ್ಳಿ ಎಂಬಲ್ಲಿ ಖರೀದಿಸಿರುವ 35 ಸೆಂಟ್ಸ್ ಜಮೀನಿನಲ್ಲಿ 4500 ಚದರ ಅಡಿಯ ಸುಮಾರು 65 ಲಕ್ಷ ರುಪಾಯಿ ವೆಚ್ಚದಲ್ಲಿ ಕುಲಾಲ ಸಮುದಾಯ ಭವನವನ್ನು ದಾನಿಗಳ ನೆರವಿನೊಂದಿಗೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಪೂರ್ವಾಹ್ನ 11.21ರ ಶುಭ ಮುಹೂರ್ತದಲ್ಲಿ ಕುಲಾಲ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಲಿದ್ದು ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುವರು. ಗೌರವಾಧ್ಯಕ್ಷ ಬಿ.ಗಿರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸುವರು. ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ರವಿ. ಎನ್. ಅವರು ಗೌರವ ಉಪಸ್ಥಿತರಿದ್ದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಕುಂದಾಪುರ ಮಂಜುನಾಥ ಆಸ್ಪತ್ರೆಯ ಡಾ. ಎಂ. ವಿ. ಕುಲಾಲ್, ದ.ಕ.ಜಿಲ್ಲಾ ಕುಲಾಲರ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಅಳಪೆ, ಜಿ.ಪಂ.ಸದಸ್ಯೆ ಕಸ್ತೂರಿ ಪಂಜ, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಪ್ರಮುಖರಾದ ಸಂದರ್ಯ ರಮೇಶ್, ಸಂಜೀವ ಬಂಗೇರಾ, ರಮಾನಂದ ಬಂಗೇರ, ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿ.ಅಧ್ಯಕ್ಷ ಸುರೇಶ್ ಕುಲಾಲ್, ಪುರಸಭಾ ಸದಸ್ಯರಾದ ಬಿ. ಮೋಹನ್ ಹಾಗೂ ಭಾಸ್ಕರ ಟೈಲರ್ ಕಾಮಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕುಲಾಲ ಸೂದಾರಕ ಸಂಘದ ಅಧ್ಯಕ್ಷ ಕೇಶವ ಮಾಸ್ತರ್, ಕಟ್ಟಡ ಸಮಿತಿಯ ಕಾರ್ಯಧ್ಯಕ್ಷ ಎ. ಲಿಂಗಪ್ಪ ಕೈಕುಂಜೆ, ಉಪಾಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್ ಹಾಜರಿದ್ದರು.
