ಬಂಟ್ವಾಳ; ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹೈನುಗಾರರು ಪಶುಸಂಗೋಪನಾ ಇಲಾಖೆಯ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪಶುಸಂಗೋಪನಾ ಇಲಾಖೆ ದ.ಕ.ಜಿಲ್ಲಾ ಪಂಚಾಯತ್,ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ,ವೀರಕಂಭ ಹಾಲು ಉತ್ಪಾದಕರ ಸಹಕಾರ ಸಂಘ ದ ಆಶ್ರಯದಲ್ಲಿ ಗೋಳ್ತಮಜಲು ಗ್ರಾಮದ ಪ್ರಗತಿಪರ ಕೃಷಿಕ ಮಹಮ್ಮದ್ ಮುಸ್ತಫಾ ರವರ ಮನೆಯಲ್ಲಿ ಶನಿವಾರ ನಡೆದ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ತಾ.ಪಂ.ಸದಸ್ಯ ಮಹಾಬಲ ಆಳ್ವ ಉದ್ಘಾಟಿಸಿದರು.

ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲುಬಾಯಿ ರೋಗವನ್ನು ನಿಯಂತ್ರಿಸುವ ಸಲುವಾಗಿ ಲಸಿಕಾ ಕಾರ್ಯಕ್ರಮವನ್ನು ದೇಶವ್ಯಾಪಿ ಏಕಕಾಲದಲ್ಲಿ ನಡೆಸಲಾಗುತ್ತದೆ, ದ.ಕ. ಜಿಲ್ಲೆಯಲ್ಲಿ ಈ ಗಾಗಲೇ 35 ತಂಡಗಳನ್ನು ರಚಿಸಲಾಗಿದ್ದು, ಮನೆಮನೆಗೆ ತೆರಳೀ ರಾಸುಗಳಿಗೆ ಲಸಿಕೆ ನೀಡಲಾಗುತ್ತದೆ ಎಂದರು. ವೇದಿಕೆಯಲ್ಲಿ ಹಾಜಿ.ಜಿ.ಅಬ್ದುಲ್ ಖಾದರ್, ಗೋಳ್ತಮಜಲು ಗ್ರಾ.ಪಂ.ಮಾಜಿ ಅಧ್ಯಕ್ಷ ಮೋನಪ್ಪ ದೇವಸ್ಯ, ಉದ್ಯಮಿ ಹನೀಫ್ ಹಾಜಿ, ವೀರಕಂಭ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದಿಲೀಪ್ ಮಾರ್ತಾ, ಕನ್ಯಾನ ಭಾರತಿ ಸೇವಾ ಶ್ರಮದ ಕಾರ್ಯದರ್ಶಿ ಈಶ್ವರ ಭಟ್, ತಾಲೂಕು ಪಶು ವೈದ್ಯಾಧಿಕಾರಿ ಡಾ.ಹೆನ್ರಿ ಲಸ್ರಾದೋ, ಪ್ರಗತಿಪರ ಕೃಷಿಕ ಮಹಮ್ಮದ್ ಮುಸ್ತಾಫಾ ಗೋಳ್ತಮಜಲು, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಉಪಸ್ಥಿತರಿದ್ದರು. ಇದೇ ವೇಳೆ ಗೋಶಾಲೆಗಳ ನಿರ್ವಹಣೆಗೆ ಪಶುಸಂಗೋಪನಾ ಇಲಾಖೆ ವತಿಯಿಂದ ನೀಡಲಾಗುವ ಪ್ರೋತ್ಸಾಹಧನದ ಚೆಕ್ ಗಳನ್ನು ತಾ.ಪಂ.ಸದಸ್ಯ ವiಹಾಬಲ ಆಳ್ವ ವಿತರಿಸಿದರು.
