ಬಂಟ್ವಾಳ: ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು , ಪ್ರೆಸ್ ಕ್ಲಬ್ ಬಂಟ್ವಾಳ ಹಾಗೂ ಪತ್ರಕರ್ತರ ರಜತ ವರ್ಷಾಚರಣಾ ಸಮಿತಿ ಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ “ಆಟ ರಂಗಾಟ” ಮಕ್ಕಳ ಬೇಸಿಗೆ ಶಿಬಿರಕ್ಕೆ ಸೋಮವಾರ ಚಾಲನೆ ದೊರೆತಿದೆ. ಬಿ.ಸಿ.ರೋಡಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಯಲ್ಲಿ ಕರಾಟೆಯ ಅಂತರ್ರಾಷ್ಟ್ರೀಯ ಮಟ್ಟದ ಬಾಲಪ್ರತಿಭೆ ಸಹನಾ ಎಂ.ಶೆಟ್ಟಿಯವರು ಗುಳ್ಳೆ ಊದುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಟರಂಗಾಟಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವರು ಮಾತನಾಡಿ, ಪತ್ರಕರ್ತರೇ ಮಕ್ಕಳ ಶಿಬಿರದ ಮೂಲಕ ಮಕ್ಕಳನ್ನು ಚಟುವಟಿಕೆಯುಕ್ತರನ್ನಾಗಿಸುತ್ತಿರುವುದು ಸಂತಸಕಾರಿ ಸಂಗತಿ. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಟ ರಂಗಾಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಬಂಟ್ವಾಳ ಕಸಾಪ ದ ಮಾಜಿ ಅಧ್ಯಕ್ಷ ಬಿ.ತಮ್ಮಯ್ಯ ರವರು ಮಾತನಾಡಿ, ಶಿಬಿರಗಳು ಮಕ್ಕಳಿಗೆ ಹೊಸತನಗಳ ಹುಡುಕಾಟಕ್ಕೆ ಅವಕಾಶವೊದಗಿಸುತ್ತದೆ, ಪತ್ರಕರ್ತರ ನೇತೃತ್ವ ಅರ್ಥಪೂರ್ಣವಾಗಿದ್ದು, ಮಕ್ಕಳು ಉತ್ಸಾಹದಿಂದ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ರವರು ಮಾತನಾಡಿ, ಮೂರು ದಿನಗಳ ಮಕ್ಕಳ ಶಿಬಿರದ ರೂಪುರೇಷೆಗಳನ್ನು ವಿವರಿಸಿದರು. ವೇದಿಕೆಯಲ್ಲಿ ಕಲಾವಿದ ಮಂಜುವಿಟ್ಲ, ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಸಂಚಾಲಕರಾದ ವೆಂಕಟೇಶ್ ಬಂಟ್ವಾಳ್, ಹರೀಶ್ ಮಾಂಬಾಡಿ ಉಪಸ್ಥಿತರಿದ್ದರು, ಸಾಂಸ್ಕೃತಿಕ ಕಾರ್ಯದರ್ಶಿ ರತ್ನದೇವ್ ಪೂಂಜಾಲಕಟ್ಟೆ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಯಾದವ ಅಗ್ರಬೈಲು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಸುಕುಮಾರ್ ಬಂಟ್ವಾಳ್, ಗೋಪಾಲ ಅಂಚನ್, ಹರ್ಷಿತಾ ಸಹಕರಿಸಿದರು. ಬಳಿಕ ಮಕ್ಕಳಿಗೆ ವಿವಿಧ ರಂಗಾಟಗಳು, ಕಥೆ, ಅಭಿನಯ, ಏಕಾಗ್ರತೆಯ ಆಟ ಹಾಗೂ ಪರಿಸರ ಗೀತೆಗಳ ಅಭ್ಯಾಸಗಳು ವಿವಿಧ ಚಟುವಟಿಕೆಗಳು ನಡೆದವು. ಮಂಗಳವಾರ ಕರಕುಶಲ ಕಲೆ, ರಂಗಾಭಿನಯ, ಚಿತ್ರಕಲೆ ಹಾಗೂ ಮಣ್ಣಿನಾಟದ ಚಟುವಟಿಕೆಗಳು ನಡೆಯಲಿದೆ.
