ಮಂಚಿ: ಮಹಾದೇವ ದೇವಸ್ಥಾನ ಧಾರ್ಮಿಕತೆಯಿಂದ ಸತ್ಕರ್ಮ ಚಿಂತನೆ: ಮಾಣಿಲಶ್ರೀ
ಬಂಟ್ವಾಳ: ಸಮಾಜದಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಜೊತೆಗೆ ಶ್ರದ್ಧಾ ಭಕ್ತಿಯಲ್ಲಿ ದೇವರ ಆರಾದನೆ ಮೂಲಕ ಸತ್ಕರ್ಮ ಚಿಂತನೆಗೆ ಕಾರಣವಾಗುತ್ತದೆ. ಇದರಿಂದಾಗಿ ಮಕ್ಕಳಲ್ಲಿ ಧಾರ್ಮಿಕತೆ ಜೊತೆಗೆ ಗುರುಹಿರಿಯರಿಗೆ ಗೌರವ ಕೊಡುವ ಪ್ರವೃತ್ತಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಮಂಚಿ ಸುಳ್ಯ ಶ್ರೀ ಮಹಾದೇವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಸಿ.ಭಂಡಾರಿ ಮಾತನಾಡಿ, ಮಕ್ಕಳೊಂದಿಗೆ ಎಲ್ಲರೂ ದೇವಸ್ಥಾನ ಮತ್ತು ದೈವಸ್ಥಾನಕ್ಕೆ ಹೋಗುವ ಪ್ರವೃತ್ತಿ ಬೆಳೆಸಿಕೊಂಡಾಗ ದೇವರ ಕೃಪೆಯೂ ಲಭಿಸುತ್ತದೆ ಎಂದರು.
ಇರಾ ಕುಂಡಾವು ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ನ ಅಧ್ಯಕ್ಷ ಜಗದೀಶ ಶೆಟ್ಟಿ, ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕ ಕಶೆಕೋಡಿ ಸೂರ್ಯನಾರಾಯಣ ಭಟ್, ಮಂಚಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋಹನದಾಸ ಶೆಟ್ಟಿ ಪುದ್ದೊಟ್ಟು ಮತ್ತಿತರರು ಶುಭ ಹಾರೈಸಿದರು. ಬ್ರ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ರಾವ್ ಪತ್ತುಮುಡಿ, ಉಪಾಧ್ಯಕ್ಷ ಸೂರ್ಯನಾರಾಯಣ ರಾವ್ ಪತ್ತುಮುಡಿ, ಪ್ರಮುಖರಾದ ಉಮಾನಾಥ ರೈ ಮೇರಾವು, ಪುಷ್ಪರಾಜ ಕುಕ್ಕಾಜೆ ಮತ್ತಿತರರು ಇದ್ದರು.
ಇದೇ ವೇಳೆ ಶಿಲ್ಪಿ ವಿಜಯ್ ಉಪ್ಪಿನಂಗಡಿ ಇವರನ್ನು ಸನ್ಮಾನಿಸಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಕೇಶವ ರಾವ್ ನೂಜಿಪ್ಪಾಡಿ ಸನ್ಮಾನಿತರನ್ನು ಪರಿಚಯಿಸಿದರು. ಭಕ್ತ ಮಂಡಳಿ ಅಧ್ಯಕ್ಷ ಗಣೇಶ ಐತಾಳ್ ಚೌಕದಪಾಲು ಪ್ರಾಸ್ತಾವಿಕ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶಂಕರ ಐತಾಳ್ ಚೌಕದಪಾಲು ಸ್ವಾಗತಿಸಿ, ರಮೇಶ್ ರಾವ್ ಪತ್ತುಮುಡಿ ವಂದಿಸಿದರು. ಶಿಕ್ಷಕ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
