ಬಂಟ್ವಾಳ; ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ದ.ಕ, ವಕೀಲರ ಸಂಘ ಬಂಟ್ವಾಳ ತಾಲೂಕು ಪಂಚಾಯತ್ ಬಂಟ್ವಾಳ ಇದರ ಆಶ್ರಯದಲ್ಲಿ ಕಾನೂನು ಸಾಕ್ಷರತಾ ರಥ, ಸಂಚಾರಿ ನ್ಯಾಯಾಲಯದ ಅಭಿಯಾನ ಮತ್ತು ಲೋಕಅದಾಲತ್ ಕಾರ್ಯಕ್ರಮವು ಮಾ.21 ರಿಂದ 24 ರವರೆಗೆ ತಾಲೂಕಿನ ವಿವಿಧೆಡೆಗಳಲ್ಲಿ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಯು.ತಿಳಿಸಿದ್ದಾರೆ.
ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕದಾಲತ್ ನ ಅಂಗವಾಗಿ ಗ್ರಾಮೀಣ ಪ್ರದೇಶಗಳ ಜನರಿಗೆ ಕಾನೂನಿನ ಅರಿವು ಹಾಗೂ ನೆರವು ಕುರಿತಾಗಿ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಬಿ.ಸಿ.ರೋಡು, ಕಾವಳಮೂಡೂರು, ಉಳಿ, ಮಣಿನಾಲ್ಕೂರು,ಅಳಿಕೆ, ಕೊಳ್ನಾಡು, ಮೆಲ್ಕಾರ್,ಮೊಡಂಕಾಪು, ಸಂಗಬೆಟ್ಟು, ಅಮ್ಟೂರು ಮೊದಲಾದೆಡೆಗಳಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಬಿ.ಸಿ.ರೋಡಿನ ರಧಾನ ಸಿವಿಲ್ ನ್ಯಾಯಾಲಯದ ಮುಂಭಾಗದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಲಾಗುವುದು ಬಳಿಕ ಕ್ರಮವಾಗಿ ಕಾವಳಮೂಡೂರು ಗ್ರಾಮಪಂಚಾಯತ್, ಉಳಿಗ್ರಾಮಪಂಚಾಯತ್ ಹಾಗೂ ಮಣಿನಾಲ್ಕೂರುನಲ್ಲಿ ಮಾಹಿತಿ ಕಾರ್ಯಗಾರ ನಡೆಯಲಿದೆ, ಮಾ.22 ರ ಮಂಗಳವಾರ ಬೆಳೀಗ್ಗೆ ಅಳಿಕೆ, ಕೊಳ್ನಾಡು ಹಾಗೂ ಅಪರಾಹ್ನದ ಬಳಿಕ ಮೆಲ್ಕಾರ್ ನ ದುರ್ಗಾಭಜನಾ ಮಂದಿರದಲ್ಲಿ ಮಾಹಿತಿ ಕಾರ್ಯಾಗಾರ ನಡೆಯಲಿದೆ, ಮಾ.23 ರ ಬುಧವಾರ ಬೆಳಿಗ್ಗೆ ಮೊಡಂಕಾಪು ಇನ್ಫೆಂಟ್ ಶಾಲೆ, ಬಳಿಕ ಕಾರ್ಮಲ್ ಕಾಲೇಜು ಮೊಡಂಕಾಪು, ಅಪರಾಹ್ನದ ಬಳಿಕ ಸಂಗಬೆಟ್ಟು ಗ್ರಾಮಪಂಚಾಯತ್ ಸಭಾಂಗಣದಲ್ಲಿ ಮಾಹಿತಿ ಕಾರ್ಯಾಗಾರ ನಡೆಯಲಿದೆ, 24 ರಂದು ಬೆಳಿಗ್ಗೆ ಅಮ್ಟೂರು ಕೃಷ್ಣ ಮಂದಿರದಲ್ಲಿ ಮಾಹಿತಿ ಕಾರ್ಯಾಗಾರ ನಡೆಯಲಿದ್ದು, ಅಪರಾಹ್ನ 2 ರಿಂದ 3 ರವರೆಗೆ ಬಿ.ಸಿ.ರೋಡಿನ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ನಡೆಯಲಿದೆ. ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ವಿವರಿಸಿದರು.
ಲೋಕ ಅದಾಲತ್ ಮೂಲಕ ಜಿಲ್ಲೆಯಲ್ಲಿ ವರ್ಷವೊಂದರಲ್ಲಿ 36 ಸಾವಿರ ಪ್ರಕರಣಗಳನ್ನು ಪರಿಹರಿಸಲಾಗಿದ್ದು, ಸರ್ಕಾರದ ಕಾನೂನು ನೆರವು ಕುರಿತಾಗಿ ಜನಸಾಮಾನ್ಯರಿಗೆ ತಿಳುವಳಿಕೆ ನೀಡುವ ಮೂಲಕ ಜಾಗೃತಿ ಆಂದೋಲನ ನಡೆಯಬೇಕಿದೆ ಇದಕ್ಕೆ ಸಂಘ ಸಂಸ್ಥೆಗಳು ಮುಂದೆಬರಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಸಹಾಯಕ ಸರ್ಕಾರಿ ವಕೀಲ ಸತೀಶ್ ಶಿವಗಿರಿ, ಆಶಾಪ್ರಸಾದ್, ಸತೀಶ್ ಬಿ, ಸುರೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
