ರಸ್ತೆ ಸರಿಪಡಿಸದೆ ಕಾಮಗಾರಿಗೆ ಅವಕಾಶ ನೀಡೆವು: ಗುಡುಗಿದ ಗ್ರಾಮಸ್ಥರು
ಕೈಕಂಬ: ಎಚ್‍ಪಿಸಿಎಲ್ ಪೈಪ್‍ಲೈನ್ ಕಾಮಗಾರಿಗೆ ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಗುರುಪುರ ಕೈಕಂಬ ಸಮೀಪದ ಕಂದಾವರದ ಟಲೆಕಿ ಎಂಬ ಪ್ರದೇಶದ ನೀಲಕಂಠೇಶ್ವರ ರಸ್ತೆಯಲ್ಲಿ ನಿನ್ನೆ ನಡೆದಿದ್ದು, ರಸ್ತೆ ಸರಿಪಡಿಸದೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಗುಡುಗಿದ್ದಾರೆ.
ಹಿನ್ನೆಲೆ: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಕಂಪೆನಿ ವತಿಯಿಂದ ಮಂಗಳೂರು, ಹಾಸನ, ಮೈಸೂರು, ಬೆಂಗಳೂರು ಮೂಲಕ ಪೈಪ್‍ಲೈನ್ ಸಾಗುತ್ತಿದೆ. ಇದೇ ಪೈಪ್‍ಲೈನ್ ಕಂದಾವರದ ಮುಖಾಂತರವೂ ಸಾಗುತ್ತಿದೆ. ಈ ಭಾಗದಲ್ಲಿ ಕಂಪೆನಿಯು ಘಟಕವೊಂದನ್ನು ನಿರ್ಮಿಸಿದ್ದು, ಪೈಪ್‍ಲೈನ್ ಹಾದುಹೋಗಲೆಂದು ಸ್ಥಳೀಯ ಜಮೀನನ್ನು ಅಗೆಯಲಾಗುತ್ತಿದೆ. ಆದರೆ ನಿನ್ನೆ ಕಂಪೆನಿ ಬುಲ್ಡೋಝರ್ ಮುಖಾಂತರ ರಸ್ತೆಯನ್ನು ಅಗೆದಿರುವುದು ಗ್ರಾಮಸ್ಥರ ಕಣ್ಣು ಕೆಂಪಗಾಗಿಸಿದ್ದು, ರಸ್ತೆಯನ್ನು ಸರಿಪಡಿಸದೇ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಕಾಮಗಾರಿಗೆ ಅಡ್ಡಿಪಡಿಸಿದರು.
hpcl (2)

1

2ಗ್ರಾಮಸ್ಥರ ಕೋಪಕ್ಕೆ ಕಾರಣವೇನು?
ಕಳೆದ ಹಲವಾರು ತಿಂಗಳಿನಿಂದ ಕಂಪೆನಿ ಘನವಾಹನಗಳಾದ ಬುಲ್ಡೋಝರ್, ಹಿಟಾಚಿ, ಲಾರಿ ಮುಂತಾದುವುಗಳು ಸಂಚರಿಸುತ್ತಿದ್ದು ಸುಸಜ್ಜಿತ ಡಾಮರು ರಸ್ತೆ ಹಾಳಾಗಿ ಹೋಗಿದೆ. ಈ ರಸ್ತೆಯಲ್ಲಿ ಗ್ರಾಮಸ್ಥರಿಗೆ ಸಂಚರಿಸಲು ದುಸ್ತರವಾಗಿ ಪರಿಣಮಿಸಿದ್ದು, ಅಪಘಾತ ಸಂಭವಿಸುವ ಭಯದಿಂದ ನಿನ್ನೆ ಪೈಪ್‍ಲೈನ್ ಕಾಮಗಾರಿ ನಡೆಸಲು ರಸ್ತೆಯನ್ನು ಅಗೆಯುತ್ತಿರುವಾಗ ಒಮ್ಮಿಂದೊಮ್ಮೆಲೆ ಕಾಮಗಾರಿ ನಡೆಸುವವರ ಮೇಲೆ ಗ್ರಾಮಸ್ಥರು ಏರಿಹೋಗಿದ್ದಾರೆ. ಈ ವೇಳೆ ಎರಡೂ ಕಡೆಯವರ ಮಧ್ಯೆ ಘರ್ಷಣೆಯ ವಾತಾವರಣ ಸೃಷ್ಟಿಯಾಗಿದ್ದು, ಕಾಮಗಾರಿ ನಡೆದಸುವವರು ವಿಡಿಯೋ ಶೂಟಿಂಗ್ ನಡೆಸುವುದಕ್ಕೂ ಅಡ್ಡಿಪಡಿಸಿದ್ದಾರೆ. ಈ ವೇಳೆ ನೂತನ ಕೊಳಂಬೆಯ ತಾ.ಪಂ. ಸದಸ್ಯರಾದ ವಿಶ್ವನಾಥ ಶೆಟ್ಟಿ ಗ್ರಾಮಸ್ಥರಿಗೆ ಬೆಂಬಲ ಸೂಚಿಸಿದ್ದಾರೆ. ಕೊನೆಗೆ ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಶಮನಗೊಳಿಸಿದ್ದಾರೆ.
ಗ್ರಾಮಸ್ಥರ ಬೇಡಿಕೆ: ಕಾಮಗಾರಿಗೆ ತಮ್ಮದೇನೂ ಅಭ್ಯಂತರವಿಲ್ಲ, ಆದರೆ ಕಾಮಗಾರಿ ನಡೆಸುವ ಮುಂಚೆ ಹಾಳಾದ ರಸ್ತೆಯನ್ನು ಸರಿಪಡಿಸಿ ಆಮೇಲೆ ಕಾಮಗಾರಿ ನಡೆಸಬೇಕು, ಇಲ್ಲವಾದರೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಠಾಣೆ ಮೆಟ್ಟಿಲೇರಿತು:
ಕಂಪೆನಿಯ ನಡೆಯನ್ನು ಪ್ರಶ್ನಿಸಿ ಗ್ರಾಮಸ್ಥರು ಬಜ್ಪೆಯ ಠಾಣೆ ಮೆಟ್ಟಿಲೇರಿದ್ದು, ಬಜ್ಪೆ ಇನ್ಸ್‍ಪೆಕ್ಟರ್ ಟಿ.ಡಿ. ನಾಗರಾಜ್ ಅವರು ಕಂದಾವರ ಪಂಚಾಯತ್ ಅಧ್ಯಕ್ಷೆ ವಿಜಯಗೋಪಾಲ ಸುವರ್ಣ, ಪಿಡಿಓ ರೋಹಿಣಿ ಸಮಕ್ಷಮ ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದರು. ಈ ವೇಳೆ ಕಂಪೆನಿಯವರು ತಮಗೆ ಕಾಮಗಾರಿ ನಡೆಸಲು ಡಿ.ಸಿ.ಯವರು ನೀಡಿದ ಆದೇಶಪ್ರತಿಯನ್ನು ಇನ್ಸ್‍ಪೆಕ್ಟರ್ ಅವರಿಗೆ ನೀಡಿದ್ದಾರೆ. ಇದನ್ನು ಗಮನಿಸಿದ ಅವರು, ಈ ಕಾಮಗಾರಿ ಕೇಂದ್ರ ಸರಕಾರದ ಆದೇಶದಂತೆ ನಡೆಯುತ್ತಿದ್ದು, ಕಾಮಗಾರಿಯನ್ನು ನಿಲ್ಲಿಸಲು ಕಾನೂನು ವ್ಯಾಪ್ತಿಯಲ್ಲಿ ಆಗುವುದಿಲ್ಲ ಎಂದು ತಿಳಿಸಿದರಲ್ಲದೆ, ಪಂ. ಅಧ್ಯಕ್ಷೆ ಹಾಗೂ ಪಿಡಿಓ ಅವರ ವಿವರಣೆಯನ್ನು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಪಿಡಿಓ, ತಾವು ಗ್ರಾಮಸ್ಥರ ಸಮಸ್ಯೆಯನ್ನು ಕಂಪೆನಿಗೆ ಪ್ರಸ್ತಾಪಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹಾಗೂ ಕಂಪೆನಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನಾಗರಾಜ್ ಅವರು ಈ ಸಮಸ್ಯೆಯನ್ನು ಜಿಲ್ಲಾಧಿಕಾರಿ ಅವರಿಗೆ ಮನವರಿಕೆ ಮಾಡುವ ಬಗ್ಗೆ ಸಲಹೆ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *