ಬಂಟ್ವಾಳ: ಮಡಿಕೇರಿ ಸಮೀಪದ ತಾಲತ್ಮನೆ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಲೂಕಿನ ಫರಂಗಿಪೇಟೆಯ ಇಬ್ಬರು ಯುವಕರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ.


ಫರಂಗಿಪೇಟೆ ಸಮೀಪದ ಹತ್ತನೇ ಮೈಲುಗಲ್ಲು ನಿವಾಸಿಯಾದ ಪ್ರಸ್ತುತ ತುಂಬೆಯಲ್ಲಿ ವಾಸವಾಗಿರುವ ಸಾಧಿಕ್ ಎಂಬವರ ಪುತ್ರ ಶಫೀಕ್(20), ಹಾಗೂ ಫರಂಗಿಪೇಟೆ ಸಮೀಪದ ಕುಂಪನಮಜಲು ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಸಮೀರ್(21) ಅಪಘಾತದಿಂದ ಮೃತಪಟ್ಟ ಯುವಕರು.
ಹತ್ತನೆ ಮೈಲುಗಲ್ಲು ನಿವಾಸಿಗಳಾದ ವಿ.ಎಚ್.ಅಶ್ವಾನ್(18), ತಪ್ಸೀರ್(18), ಇರ್ಫಾನ್(19), ಕುಂಪನಮಜಲು ನಿವಾಸಿ ಸಮೀರ್(19) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮಡಿಕೇರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.
ವಿ.ಎಚ್.ಅಶ್ವಾನ್, ಇರ್ಫಾನ್, ಸಮೀರ್ ಈ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಪ್ಸೀರ್ ಸಣ್ಣ ಪುಟ್ಟ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತನಿಗೆ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಆರು ಮಂದಿ ಸ್ನೇಹಿತರಾಗಿದ್ದು, ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮಡಿಕೇರಿಗೆ ಐ10 ಕಾರಿನಲ್ಲಿ ಪ್ರವಾಸಕ್ಕೆಂದು ತೆರಳಿದ್ದರು. ಮಡಿಕೇರಿಯಿಂದ ಮಂಗಳೂರು ಕಡೆಗೆ ಸಂಚಾರಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಇವರ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಶಫೀಕ್ ಸ್ಥಳದಲ್ಲೇ ಮೃತಪಟ್ಟರೆ, ಸಮೀರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಮೃತರಾದ ಶಫೀಕ್ ತುಂಬೆಯ ಅರಫಾ ಮರಳು ಲಾರಿಯಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರೆ, ಸಮೀರ್ ಫರಂಗಿಪೇಟೆಯಲ್ಲಿರುವ ಆತನ ಸಂಬಧಿಕರ ರೆಡಿಮೇಡ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ. ಉಳಿದಂತೆ ವಿ.ಎಚ್.ಅಶ್ವಾನ್ ಮತ್ತು ತಪ್ಸೀರ್ ಮಂಗಳೂರಿನ ಬಿ.ಡಿ.ಪಿ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದರೆ, ಇರ್ಫಾನ್ ಮಂಗಳೂರಿನ ನ್ಯಾಷನಲ್ ಟುಟ್ಯೋರಿಯಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಹಾಗೂ ಸಮೀರ್ ಕೊಣಾಜೆ ಪಿ.ಎ. ಎಂಜಿನಿಯರ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದಾನೆ.





