ಕೈಕಂಬ : ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಅವರ ಕಾರಿಗೆ ಕಲ್ಲುತೂರಾಟ ನಡೆಸಿ ಕಾರಿನ ಗಾಜಿಗೆ ಹಾನಿಗೊಳಿಸಿದ ಘಟನೆ ಪೊಳಲಿ ಸಮೀಪದ ಅಡ್ಡೂರು ಮತಗಟ್ಟೆಯಲ್ಲಿ ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ನಡೆದಿದೆ. ಘಟನೆಯಿಂದ ಸ್ವಲ್ಪಹೊತ್ತು ಸ್ಥಳದಲ್ಲಿ ಬಿಗುವಿನ ಸ್ಥಿತಿ ಉಂಟಾಗಿದ್ದು, ಪೊಲೀಸರು ಶಮನಗೊಳಿಸಿದ್ದಾರೆ.
ಘಟನೆಯ ವಿವರ: ವಿಹಿಂಪ ಮುಖಂಡ ಜಗದೀಶ್ ಶೇಣವ ಅವರು ಗುರುಪುರ ಜಿ.ಪಂ. ಬಿಜೆಪಿ ಅಭ್ಯರ್ಥಿ ಹರೀಶ್ ಮೂಡುಶೆಡ್ಡೆ ಜೊತೆಗೆ ಕಾರಿನಲ್ಲಿ ಗುರುಪುರ ಜಿ.ಪಂ., ತಾಪಂ., ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಾದ ಅಡ್ಡೂರಿಗೆ ಭೇಟಿ ಇತ್ತಿದ್ದರು. ಈ ಸಂದರ್ಭ ಅಡ್ಡೂರು ಮತಗಟ್ಟೆಯ ಸ್ವಲ್ಪ ದೂರದಲ್ಲಿ ದುಷ್ಕರ್ಮಿಗಳು ಕಾರಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ. ಕಲ್ಲೇಟಿನ ರಭಸಕ್ಕೆ ಕಾರಿನ ಗಾಜಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳದಲ್ಲಿ ಜನರು ಜಮಾವಣೆಗೊಂಡಿದ್ದು, ಸ್ವಲ್ಪ ಹೊತ್ತು ವಾಗ್ವಾದ ನಡೆದಿತ್ತು. ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ಶಮನಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಅಡ್ಡೂರು ಮತಗಟ್ಟೆ ಅತ್ಯಂತ ಕೋಮುಸೂಕ್ಷ್ಮ ಮತಗಟ್ಟೆ ಎಂಬ ಕುಖ್ಯಾತಿ ಪಡೆದಿದ್ದು, ಈ ಹಿಂದೆಯೂ ಕಲ್ಲುತೂರಾಟ, ವಾಗ್ವಾದದಂಥ ಘಟನೆ ನಡೆದಿತ್ತು.
