ಕೈಕಂಬ: ಗುರುಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಪರವಾಗಿ ಕಣಕ್ಕಿಳಿದಿರುವ ಹರೀಶ್ ಮೂಡುಶೆಡ್ಡೆ ಅವರು ಮತಬೇಟೆಯಲ್ಲಿ ತೊಡಗಿದ್ದು, ಯುವಮತದಾರರ ಮೇಲೆ ಕಣ್ಣಿಟ್ಟಿದ್ದಾರೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇವರು ಹಲವಾರು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿರುವುದು ಇವರ ಪ್ಲಸ್ ಪಾಯಿಂಟ್. ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಸಂದರ್ಭ ಕ್ಷೇತ್ರಕ್ಕೆ ಹಲವಾರು ಅನುದಾನವನ್ನು ತಂದುಕೊಟ್ಟು, ಮನೆಮಾತಾಗಿರುವ ಹರೀಶ್ ಅವರು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಗೆದ್ದಿದ್ದೇ ಆದರೆ ಮತ್ತಷ್ಟು ಅನುದಾನವನ್ನು ತಂದುಕೊಟ್ಟು ಮೋದಿಯ ಕನಸನ್ನು ನನಸು ಮಾಡುವುದಾಗಿ ಕಾರ್ಯಕರ್ತರಲ್ಲಿ ಹೇಳಿಕೊಂಡಿದ್ದಾರೆ.

ಉತ್ಸಾಹಿ ತರುಣಪಡೆಯೊಂದಿಗೆ ಮತಪ್ರಚಾರದಲ್ಲಿ ತೊಡಗಿರುವ ಹರೀಶ್ ಅವರು ತನಗೆ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳುತ್ತಿದ್ದು, ಗೆದ್ದೇಗೆಲ್ಲುತ್ತೇನೆ ಎಂಬ ಆತ್ಮವಿಶ್ವಾದಲ್ಲಿದ್ದಾರೆ. ಜಿಲ್ಲಾಪಂಚಾಯತ್ನಲ್ಲಿ ಬಿಜೆಪಿ ಸ್ಪಷ್ಟ ಬಹುಮತಗಳಿಂದ ಗೆದ್ದಿದ್ದೇ ಆದರೆ ಜಿ.ಪಂ. ಅಧ್ಯಕ್ಷನಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಇವರ ವಿರುದ್ಧ ಕಾಂಗ್ರೆಸ್ ಪರವಗಿ ಯುಪಿ ಇಬ್ರಾಹಿಂ ಸ್ಪರ್ಧಿಸುತ್ತಿದ್ದು, ಇವರು ಕೂಡಾ ಅಷ್ಟೇ ಪ್ರಭಾವಿಯಾಗಿದ್ದಾರೆ. ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿರುವ ಅವರು ಇದೇ ತಮಗೆ ಗೆಲುವು ತಂದುಕೊಡಬಲ್ಲುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಒಟ್ಟಾರೆ ಇಬ್ಬರು ಪ್ರಬಲ ಅಭ್ಯರ್ಥಿಗಳ ನಡುವೆ ನೇರಾನೇರ ಪೈಪೋಟಿ ಉಂಟಾಗಿದ್ದು, ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.
