ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮದಲ್ಲಿರುವ `ಆದರ್ಶ ಆಂಗ್ಲ ಮಾಧ್ಯಮ ಶಾಲೆ’ಯಲ್ಲಿ ವಿದ್ಯಾರ್ಥಿಗಳಿಗೆ ಕೈ, ಮುಖ, ಪಾತ್ರೆ ತೊಳೆಯಲೆಂದು ಆವರಣ ಗೋಡೆಗೆ ಅಳವಡಿಸಿರುವ ತೊಟ್ಟಿ ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ.
ಸಜಿಪನಡು ಜಂಕ್ಷನ್ನಿಂದ ಕಂಚಿನಡ್ಕ ಪದವಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ತಾಗಿಕೊಂಡೇ ಈ ಶಾಲೆ ಇದೆ. ಶಾಲಾ ಮಕ್ಕಳು ಕೈ, ಮುಖ ಹಾಗೂ ಮಧ್ಯಾಹ್ನದ ಊಟದ ಬಳಿಕ ಪಾತ್ರೆಗಳನ್ನು ತೊಳೆಯಲೆಂದು ತಗಡಿನಿಂದ ಮಾಡಿರುವ ತೊಟ್ಟಿಯೊಂದನ್ನು ಶಾಲಾ ಆಡಳಿತ ಮಂಡಳಿ ರಸ್ತೆಗಿಂತ ಎತ್ತರದಲ್ಲಿರುವ ಶಾಲೆಯ ಆವರಣ ಗೋಡೆಯ ಹೊರ ಭಾಗಕ್ಕೆ, ಅಂದರೆ ರಸ್ತೆಯ ಕಡೆಗೆ ಅಳವಡಿಸಿದೆ. ಮಕ್ಕಳು ಕೈ, ಮುಖ ಹಾಗೂ ಮಧ್ಯಾಹ್ನದ ಊಟದ ಬಳಿಕ ಪಾತ್ರೆಗಳನ್ನು ತೊಳೆಯುವಾಗ ಕೆಳಗಡೆಯಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಜನರ ಮೇಲೆ ಹಾಗೂ ರಸ್ತೆಯಲ್ಲಿ ಸಂಚಾರಿಸುವ ವಾಹನಗಳ ಮೇಲೆ ನೀರು ಚೆಲ್ಲುತ್ತಿದೆ ಎಂಬುದು ಸಾರ್ವಜನಿಕರ ಆರೋಪ. ಕೆಲವು ಮಕ್ಕಳಂತೂ ಪಾತ್ರೆಗಳಲ್ಲಿ ನೀರು ತುಂಬಿಸಿ ಉದ್ದೇಶಪೂರಕವಾಗಿಯೇ ರಸ್ತೆಯಲ್ಲಿ ಸಂಚಾರಿಸುವ ಜನರ, ವಾಹನಗಳ ಮೇಲೆ ಚೆಲ್ಲುತ್ತಿದ್ದಾರೆ ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ.SHALA THOTTI 05
* ನಾಗರಿಕರಿಕ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವ ಶಾಲಾ ತೊಟ್ಟಿ!
SHALA THOTTI 01 (1)

SHALA THOTTI 06

SHALA THOTTI 02

ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವ ತೊಟ್ಟಿಯನ್ನು ತೆಗೆದು ಶಾಲಾ ಆವರಣ ಗೋಡೆಯ ಒಳ ಭಾಗದಲ್ಲಿ ಅಳವಡಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ. ಆದರೆ, ಆಡಳಿತ ಮಂಡಳಿ ನಮ್ಮ ಮನವಿಗೆ ಸೊಪ್ಪು ಹಾಕಿಲ್ಲ. ಇದರಿಂದಾಗಿ ಆ ಬಳಿಕ ಸಜಿಪನಡು ಗ್ರಾಮ ಪಂಚಾಯತ್ಗೆ ದೂರು ನೀಡಿದ್ದೇವೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಲ್ಲಿ ಸಮಸ್ಯೆಯ ಕುರಿತು ತಿಳಿ ಹೇಳಿದ್ದೇವೆ. ಅವರು ನ್ಯಾಯ ಒದಗಿಸುವ ಭರವಸೆ ಕೂಡಾ ನೀಡಿದ್ದರು. ಆದರೆ, ಅದ್ಯಾವುದೂ ಪ್ರಯೋಜನವಾಗಿಲ್ಲ’ ಎಂದು ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.

ತಾಪಂ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣ ಅಧಿಕಾರಿಗೂ ಈ ಬಗ್ಗೆ ದೂರು ನೀಡಲಾಗಿದೆ. ಆದರೆ, ಇದು ನಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ಎಲ್ಲ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದು ಸ್ಥಳೀಯ ಹಿರಿಯ ನಾಗರಿಕರೊಬ್ಬರು ಆರೋಪಿಸಿದ್ದಾರೆ.

ಅನಾಹುತ್ತಕ್ಕೆ ನಾಂದಿ: ಈ ಶಾಲೆಯಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕೈ, ಮುಖ, ಪಾತ್ರೆ ತೊಳೆಯಲು ಅಳವಡಿಸಿರುವ ಈ ತೊಟ್ಟಿಯಲ್ಲಿ ಬರೇ ಮೂರು ಟ್ಯಾಪ್ಗಳಿರುವುದು. ಮಧ್ಯಾಹ್ನದ ಊಟದ ಬಳಿಕ ಕೈ, ಪಾತ್ರೆ ತೊಳೆಯಲು ವಿದ್ಯಾಥಿಗಳು ಒಮ್ಮೆಲೆ ಮುಗಿ ಬೀಳುತ್ತಾರೆ. ಎತ್ತರದಲ್ಲಿರುವ ಆವರಣ ಗೋಡೆಯ ಹೊರ ಭಾಗದಲ್ಲಿ ತೊಟ್ಟಿ ಇರುವುದರಿಂದ ಮಕ್ಕಳು ತಮ್ಮ ದೇಹವನದ್ನು ಸಂಪೂರ್ಣವಾಗಿ ಭಾಗಿಸಿಯೇ ಪಾತ್ರೆ, ಕೈ ತೊಳೆಯಬೆಕಾಗಿದೆ. ಈ ವೇಳೆ ಚಿಕ್ಕ ತರಗತಿಯ ಮಕ್ಕಳು ಆವರಣ ಗೋಡೆಯಿಂದ ರಸ್ತೆಗೆ ಆಯತಪ್ಪಿ ಬೀಳುವ ಅಪಾಯಗಳಿವೆ ಎಂದು ಆತಂಕ ವ್ಯಕ್ತಪಡಿಸಿರುವ ಸಾರ್ವಜನಿಕರು, ಗ್ರಾಮ ಪಂಚಾಯತ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಶಾಲೆಯ ತೊಟ್ಟಿಯಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಮೂರು ತಿಂಗಳ ಹಿಂದೆ ಸಾರ್ವಜನಿಕರಿಂದ ಲಿಖಿತವಾಗಿ ದೂರು ಬಂದಿದೆ. ಸಾರ್ವಜನಿಕರ ದೂರು ಹಾಗೂ ಸ್ವಚ್ಛ ಭಾರತ್ ಮಿಶನ್ ಜಿಲ್ಲಾ ಸಂಯೋಜಕಿ ಮಂಜುಳಾ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯ ಆದೇಶದ ಮೇರೆಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಪಂಚಾಯತ್ನಿಂದ ಪತ್ರ ಬರೆದು ತೊಟ್ಟಿಯನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ. ಆದರೆ, ಶಾಲೆಯವರು ಈವರೆಗೆ ಯಾವುದೇ ಕ್ರಮ ತೆಗೆದಿಲ್ಲ. ಮುಂದಿನ ದಿನಗಳಲ್ಲಿ ಆದೇಶಕ್ಕೆ ಸ್ಪಂದಿಸದಿದ್ದಲ್ಲಿ ಪೊಲೀಸ್ ಭದ್ರತೆಯೊಂದಿಗೆ ತೊಟ್ಟಿ ತೆರವುಗೊಳಿಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲಾಗುವುದು.

– ವೀರಪ್ಪ ಗೌಡ, ಪಿಡಿಒ ಸಜಿಪನಡು ಗ್ರಾಪ

By suddi9

Leave a Reply

Your email address will not be published. Required fields are marked *