ಮೂಡುಬಿದರೆ: ದಲಿತ ಕಾಲೋನಿ, ಶಾಲೆಯಿರುವ ಗಾಂಧಿನಗರ ಪ್ರದೇಶದಲ್ಲಿ ಬಾರ್‍ಗೆ ನಿರಾಪೇಕ್ಷಣಾ ಪತ್ರ ನೀಡುವುದನ್ನು ರದ್ದು ಪಡಿಸಬೇಕೆಂದು ಪುರಸಭಾ ಸದಸ್ಯರು ಒತ್ತಾಯಿಸಿದ್ದರೂ, ಪುರಸಭೆ ಆಡಳಿತವು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸೋಮವಾರ ನಡೆದ ಪುರಸಭಾ ಅಧಿವೇಶನದಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಹಿರಿಯ ಆರೋಗ್ಯ ನಿರೀಕ್ಷಕಿ ಇಂದು, ಬಾರ್ ಇರುವ ಪ್ರದೇಶದಲ್ಲಿ ಯಾವುದೇ ಶಾಲೆಯಿಲ್ಲವೆಂದು ಅಬಕಾರಿ ಇಲಾಖೆಯವರು ವರದಿ ನೀಡಿದ್ದು, ಈ ಕಾರಣ ನಿರಾಪೇಕ್ಷಣಾ ಪತ್ರವನ್ನು ರದ್ದುಗೊಳಿಸಿಲ್ಲ ಎಂದರು. ಹೇಳಿಕೆಯಿಂದ ಆಕ್ರೋಶಗೊಂಡ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಬಾರ್ ಇರುವ ಕಟ್ಟಡ ಹಿಂದೆ ದಲಿತರ ಮನೆಗಳಿವೆ. ಪಕ್ಕದಲ್ಲೇ ಪ್ರಾಥಮಿಕ ಶಾಲೆಯಿದೆ. ನಿರಾಪೇಕ್ಷಣಾ ಪತ್ರ ರದ್ದುಗೊಳಿಸುವಂತೆ ಸದಸ್ಯರು ಒತ್ತಾಯಿಸಿದ್ದರೂ, ಯಾಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಪ್ರೇಮಾ ಸಾಲ್ಯಾನ್, ಡಿಸಿ ಹಾಗೂ ಎಸಿಯವರು ಬಂದು ಸ್ಥಳ ಪರಿಶೀಲನೆ ಮಾಡಿದರೆ ನಿಜಾಂಶ ಬೆಳಕಿಗೆ ಬರುತ್ತದೆ. ಅಧಿಕಾರಿಗಳೇ ಎಲ್ಲದನ್ನು ನಿರ್ಣಯಿಸುವುದಾದರೇ ನಾವ್ಯಾಕೆ ಇರೋದು ಎಂದು ಆಕ್ರೋಶಿತರಾದರು. ಕಳೆದ ಸಭೆಯಲ್ಲಿ ನಿರಾಕ್ಷೇಪಣಾ ಪತ್ರ ರದ್ದು ಪಡಿಸುವಂತೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದ ನಿರ್ಣಯದ ಪ್ರತಿಯನ್ನು ನೀಡಿ ಎಂದು ಸದಸ್ಯ ಹನೀಫ್ ಒತ್ತಾಯಿಸಿದರು. ಫಲಾನುಭವಿಗಳ ಪಟ್ಟಿ ಸಹಿತ ವಿವಿಧ ತಾಂತ್ರಿಕ ಕೆಲಸವಿದ್ದ ಕಾರಣ ನಿರ್ಣಯ ಪ್ರತಿಯನ್ನು ಸಿದ್ಧಪಡಿಸಲಾಗಲಿಲ್ಲ ಎಂದು ಮುಖ್ಯಾಧಿಕಾರಿ ಶೀನ ನಾಯ್ಕ್ ಸಮಜಾಯಿಸಲು ಪ್ರಯತ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಕಳೆದ ಎರಡು ತಿಂಗಳ ಹಿಂದೆ ನಡೆದ ಸಭೆಯ ನಿರ್ಣಯ ಇನ್ನೂ ಕೈಕೊಂಡಿಲ್ಲವೆಂದಾದರೆ, ಸಿಬ್ಬಂದಿಗಳಿರುವುದ್ಯಾಕೆ? ಎಂದು ಪುರಸಭಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

IMG_65872.61ಲಕ್ಷ ರೂ. ಕಾಮಗಾರಿ ಗೋಲ್‍ಮಾಲ್:
5ನೇ ವಾರ್ಡ್‍ನಲ್ಲಿ ಕಡ್ದಬೆಟ್ಟುವಿನಿಂದ ಸ್ವರಾಜ್ಯ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ 65ಮೀ. ಚರಂಡಿಗೆ ರೂ.2,61,611 ಲಕ್ಷದ ಕಾಮಗಾರಿ ಗುತ್ತಿಗೆದಾರ ಕಣ್ಣನ್ ನಿರ್ವಹಿಸಿದ್ದಾರೆ ಎಂದು ಖರ್ಚುವೆಚ್ಚದ ಪ್ರತಿಯಲ್ಲಿ ತೋರಿಸಲಾಗಿದೆ. ಆದರೆ ಈ ಕಾಮಗಾರಿಯನ್ನು ಆಳ್ವಾಸ್ ಸಂಸ್ಥೆಯವರು ಮಾಡಿಕೊಟ್ಟಿರುತ್ತಾರೆ. ಪುರಸಭೆಯಿಂದ ಮಾಡದ ಕಾಮಗಾರಿಗೆ ಹೇಗೆ ಆ ಮೊತ್ತ ಪಾವತಿಸಿದ್ದಾರೆ. ಪುರಸಭೆಯ ಹಣವನ್ನು ಯಾವ ರೀತಿ ಹಾಳು ಮಾಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸಲು ಕಣ್ಣನ್‍ಗೆ ಮಂಪರು ಪರೀಕ್ಷೆ ಮಾಡುವುದು ಉತ್ತಮ. ಈ ಭಾರಿ ಅವ್ಯವಹಾರದ ಹಿಂದೆ ಯಾರಿದ್ದಾರೆ, ಯಾವ ರೀತಿ ಗೋಲ್‍ಮಾಲ್ ಆಗಿದೆ ಎನ್ನುವುದಕ್ಕೆ ನನ್ನ ಬಳಿ ದಾಖಲೆಗಳಿವೆ. ಸೂಕ್ತ ಸಂದರ್ಭದಲ್ಲಿ ಅದನ್ನು ಸಾಬೀತು ಪಡಿಸುತ್ತೇನೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕಣ್ಣನ್ ಅವರನ್ನು ತಕ್ಷಣ ಸಭೆಗೆ ಕರೆಯಿರಿ. ಅವ್ಯವಹಾರ ನಡೆದಿರುವುದು ಸಾಬೀತಾದರೆ ಆತನನ್ನು ಬ್ಲಾಕ್‍ಲಿಸ್ಟ್‍ಗೆ ಹಾಕಬೇಕೆಂದು ಸದಸ್ಯ ನಾಗರಾಜ ಪೂಜಾರಿ ಒತ್ತಾಯಿಸಿದರು. ಪುರಸಭಾಧಿಕಾರಿಗಳು ಕಣ್ಣನ್ ಅವರಿಗೆ ದೂರವಾಣಿ ಸಂಪರ್ಕಿಸಿದ್ದು, ನಾಟ್‍ರೀಚಬಲ್ ಬರುತಿತ್ತು.
ಕಸಕ್ಕೆ ರೂ.8 ಲಕ್ಷ:
ಮಂಗಳೂರು ಘನತ್ಯಾಜ್ಯ ಘಟಕಕ್ಕೆ ಹಿಂದೆ ತ್ಯಾಜ್ಯ ವಿಲೇವಾರಿ ಮಾಡುತಿದ್ದಾಗ, ವಾಹನ ಬಾಡಿಗೆ ರೂ.2 ಲಕ್ಷ ಮೀರುತ್ತಿರಲಿಲ್ಲ. ಆದರೆ ಪೇಟೆಯ ಹತ್ತಿರವಿರುವ ಕರಿಂಜೆ ಘನತ್ಯಾಜ್ಯ ಘಟಕಕ್ಕೆ ತ್ಯಾಜ್ಯ ವಿಲೇವಾರಿ ಮಾಡಲು 8 ಲಕ್ಷ ಖರ್ಚಾಗುತ್ತಿದೆ ಎಂದು ಮಾಹಿತಿ ನೀಡಿದ್ದೀರಿ. ಸ್ವಚ್ಛತೆಯ ಹೆಸರಿನಲ್ಲಿ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ ಎಂದು ಸದಸ್ಯ ಲಕ್ಷಣ್ ಪೂಜಾರಿ ಆರೋಪಿಸಿದರು. ಮನೆಮನೆಗೆ ತೆರಳಿ ಕಸ ಸಂಗ್ರಹಣೆ ಮಾಡುತ್ತಿರುವುದರಿಂದ ಅಧಿಕ ವೆಚ್ಚವಾಗುತ್ತಿದೆ. ಮುಂದೆ ಘನತ್ಯಾಜ್ಯದ ಬಹುತೇಕ ಎಲ್ಲ ಕೆಲಸಗಳನ್ನೊಳಗೊಂಡಂತೆ ವಾರ್ಷಿಕ ರೂ.95 ಲಕ್ಷದ ಟೆಂಡರ್ ಪ್ರಕಟಿಸುವ ಚಿಂತನೆಯಿದೆ ಎಂದು ಪರಿಸರ ಅಧಿಕಾರಿ ಶಿಲ್ಪಾ ಸಭೆಯ ಗಮನಕ್ಕೆ ತಂದರು. ನನ್ನ ವಾರ್ಡಿನಲ್ಲಿ ಕಸ ಸಂಗ್ರಹಣೆಯಾಗುತ್ತಿಲ್ಲ, ಕಸದ ಸಂಗ್ರಹಣೆ ಶುಲ್ಕ ಮಾತ್ರ ಸಂಗ್ರಹಣೆಯಾಗುತ್ತಿದ್ದೆ ಎಂದು ಸದಸ್ಯ ದಿನೇಶ್ ಪೂಜಾರಿ ತಿಳಿಸಿದರು.
ಬಸ್‍ನಿಲ್ದಾಣದಲ್ಲಿ ಖಾಸಗಿ ವಾಹನ:
ಮೂಡುಬಿದರೆ ಬಸ್ ನಿಲ್ದಾಣದಲ್ಲಿ ಬಸ್‍ಗಳಿಗಿಂತ ಖಾಸಗಿ ವಾಹನಗಳ ಹೆಚ್ಚಾಗಿವೆ. ಪುರಸಭೆಗೆ ತೆರಿಗೆ ಭರಿಸುವ ಬಸ್‍ಗಳನ್ನು ನಿಲ್ಲಿಸುವುದಕ್ಕೆ ಪರದಾಡಬೇಕಾಗಿದೆ, ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ನಾಮನಿರ್ದೇಶಿತ ಸದಸ್ಯ ಉಮೇಶ್ ದೇವಾಡಿಗ ಸಭೆಯ ಗಮನಕ್ಕೆ ತಂದರು. ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದರು.
ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸದಸ್ಯರಾದ ಬಾಹುಬಲಿ ಪ್ರಸಾದ್, ಪಿ.ಕೆ ಥೋಮಸ್, ಶೇಖರ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *