ಮೂಡುಬಿದಿರೆ : ಇಂಡಿಗೋ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿರುವುದನ್ನು ಖಚಿತ ಮಾಹಿತಿ ಮೇರೆಗೆ ಬೆನ್ನತ್ತಿದ ಪೊಲೀಸರು ವಾಹನ ಸಹಿತ 3 ದನಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ಬೆಳಿಗ್ಗೆ ಸಮಯ 7ರ ವೇಳೆಗೆ ಆಲಂಗಾರಿನಲ್ಲಿ ನಡೆದಿದೆ.
ಇಂಡಿಕಾ ವಿಸ್ತಾ ಕೆಎ-19 ಎಂಡಿ-2280 ನಂಬರಿನ ವಾಹನದಲ್ಲಿ ಬೆಳುವಾಯಿಯಿಂದ ಮೂಡುಬಿದರೆ ಕಡೆಗೆ ದನಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬೆನ್ನತ್ತಿಕೊಂಡು ಬಂದಿದ್ದು ಈ ಸಂದರ್ಭದಲ್ಲಿ ದನ ಸಾಗಾಟದ ವಾಹನವು ಆಲಂಗಾರು ಜಂಕ್ಸನ್‍ನಲ್ಲಿ ಪಲ್ಟಿ ಹೊಡೆದಿದ್ದು ವಾಹನದಲ್ಲಿದ್ದವರು ಓಡಿ ತಪ್ಪಿಸಿಕೊಂಡಿದ್ದಾರೆ. ನಂತರ ಪೊಲೀಸರು ವಾಹನದಲ್ಲಿದ್ದ ಗೋವುಗಳ ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನ ಯಾರದೆಂದು ಇನ್ನು ತನಿಖೆಯ ನಂತರ ತಿಳಿದು ಬರಬೇಕಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
