ಮಂಗಳೂರು: ಲೋಕಸಭಾ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿಇದೆ. ಆದರೆ ಬೋದೆಲ್ ನಲ್ಲಿ ಸುರಕ್ಷಿತವಾಗಿ ಇಡಲಾದ ಮತಯಂತ್ರ ಕಾಯೋ ಸಿಬ್ಬಂದಿಗೆ ಮಲೇರಿಯಾ ಕಾಟ ಶುರುವಾಗಿದೆ. ಸರಕಾರ ಹಾಗೂ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಮಲೇರಿಯಾ ವ್ಯಾಪಿಸಿಉ ಕಾರಣ ವೆಂದು ಆರೋಪಿಸುತ್ತಿದ್ದಾರೆ.
ನಗರದಲ್ಲಿ ಮಲೇರಿಯಾ ವ್ಯಾಪಿಸುತ್ತಿದ್ದು , ಬೋಂದೆಲ್‌ನ ಮತ ಯಂತ್ರ ರಕ್ಷಣೆಗೆ ನಿಯೋಜಿತರಾಗಿರುವ ಭದ್ರತಾ ಸಿಬ್ಬಂದಿಗಳ ಪೈಕಿ ಮತ್ತೆ ನಾಲ್ವರಿಗೆ ಮಲೇರಿಯಾ ಸೋಂಕು ತಗಲಿರುವುದು ಪತ್ತೆಯಾಗಿದೆ. ಇದರಿಂದ ಇಲ್ಲಿ ಒಟ್ಟು 5 ಸಿಬ್ಬಂದಿಗೆ ಮಲೇರಿಯಾ ತಗಲಿದಂತಾಗಿದ್ದು, ಇಬ್ಬರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸ್ ಪೇದೆಗಳಾದ ಇಬ್ರಾಹಿಂ, ಜಯ ಪೂಜಾರಿ,ರೋಹಿತ್ ಮತ್ತು ಹನುಮಂತ ಅವರ ರಕ್ತದಲ್ಲಿ ಮಲೇರಿಯಾ ರೋಗಾಣು ಕಂಡುಬಂದಿದ್ದು, ಅವರಿಗೆ ಸೂಕ್ತ ಮಾತ್ರೆಗಳನ್ನು ನೀಡಲಾಗಿದೆ. ಇಬ್ರಾಹಿಂ ಮತ್ತು ಜಯ ಪೂಜಾರಿಯವರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಲೇ ಸುಮಾರು 102 ಸಿಬ್ಬಂದಿಯ ರಕ್ತ ತಪಾಸಣೆ ಮಾಡಲಾಗಿದ್ದು , ಮೊದಲ ದಿನ ಒಬ್ಬರ ರಕ್ತದಲ್ಲಿ ಮಲೇರಿಯಾ ಪಾಸಿಟಿವ್ ವರದಿ ಬಂದಿತ್ತು. ಅವರಲ್ಲಿ 12 ಮಂದಿಗೆ ವೈರಲ್ ಜ್ವರ ಬಂದಿದೆ. ನಾಲ್ವರು ಸಿಬ್ಬಂದಿಯ ರಕ್ತದಲ್ಲಿ ಮಲೇರಿಯಾ ರೋಗ ಲಕ್ಷಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ತಕ್ಷಣದ ಮಾತ್ರೆಗಳನ್ನು ನೀಡಲಾಗಿದೆ ಎಂದು ಪರಿಸರ ಎಂಜಿನಿಯರ್ ಮನು ಕುಮಾರ್ ತಿಳಿಸಿದ್ದಾರೆ.
ಮೂರು ದಿನಗಳಲ್ಲಿ ಬಹುತೇಕ ಎಲ್ಲ ಭದ್ರತಾ ಸಿಬ್ಬಂದಿಗಳ ರಕ್ತ ಪರೀಕ್ಷೆ ಮಾಡಲಾಗಿದೆ. ಮೊದಲ ದಿನ ಮಲೇರಿಯಾ ಪತ್ತೆಯಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಸಿಬ್ಬಂದಿ, ದಿಲ್ಲಿ ಮೂಲದ ರಾಜ್‌ದೇವ್ ಸಿಂಗ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಮಲ್ಟಿಪರ್ಪಸ್ ವರ್ಕರ್ (ಎಂಪಿಡಬ್ಲ್ಯೂ) ಸುಮಿತಾ ತಿಳಿಸಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಫಾಗಿಂಗ್ ಹಾಗೂ ಇತರ ನೈರ್ಮಲ್ಯ ಕಾರ್ಯಗಳನ್ನು ಮಂಗಳೂರು ಮಹಾನಗರ ಪಾಲಿಕೆ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ. 
